ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಪಾಕ್ ನಾಯಕ ಮೇಲ್ನೋಟಕ್ಕೆ ಬೆಂಬಲಿಸಿರುವುದು ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಪಾಕ್ ನಾಯಕನೋರ್ವ ರಾಹುಲ್ ಗಾಂಧಿ ಹಾಗೂ ಅರವಿಂದ್ ಕೇಜ್ರಿವಾಲ್ ಗೆ ಬೆಂಬಲ ಪ್ರಕಟಿಸಿರುವುದು ಗಂಭೀರವಾದ ವಿಷಯವಾಗಿದ್ದು ಈ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದ್ದಾರೆ.
ಸುದ್ದಿ ಸಂಸ್ಥೆ IANS ಗೆ ಸಂದರ್ಶನ ನೀಡಿರುವ ನರೇಂದ್ರ ಮೋದಿ, ನಾನು ಇರುವ ಹುದ್ದೆಗೆ ಇಂತಹ ವಿಷಯಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದು ಉಚಿತವಲ್ಲ, ಆದರೆ ನಿಮ್ಮ ಆತಂಕ ನನಗೆ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಚುನಾವಣೆ ನಡೆಯುತ್ತಿದ್ದಾಗ ಪಾಕಿಸ್ತಾನದ ಮಾಜಿ ಸಚಿವ ಚೌಧರಿ ಫವಾದ್ ಹುಸೇನ್, ಅರವಿಂದ್ ಕೇಜ್ರಿವಾಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈ ವಿಷಯವಾಗಿ ಕೇಳಿದಾಗ, ಮಾತನಾಡಿರುವ ಪ್ರಧಾನಿ ಮೋದಿ, ನಮ್ಮೊಂದಿಗೆ ಶತ್ರುತ್ವ ಹೊಂದಿರುವ ಜನರಿಂದ ಅದ್ಯಾಕೆ ಕೆಲವರು ಮಾತ್ರ ಮೆಚ್ಚಲ್ಪಡುತ್ತಾರೆ ಎಂಬುದು ಅರ್ಥವಾಗುವುದಿಲ್ಲ, ಅಲ್ಲಿಂದ ಕೆಲವರ ಪರವಾಗಿ ಯಾಕೆ ಧ್ವನಿ ಕೇಳಿಬರುತ್ತದೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.
ಇದು ಕಳವಳಕಾರಿ ಸಂಗತಿ ಎಂದು ಒಪ್ಪಿಕೊಂಡ ಪ್ರಧಾನಿ, ಭಾರತೀಯ ಮತದಾರರು ಪ್ರಬುದ್ಧರಾಗಿದ್ದಾರೆ ಮತ್ತು ಗಡಿಯಾಚೆಗಿನ ಹೇಳಿಕೆಗಳು ಭಾರತದಲ್ಲಿನ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
"ಚುನಾವಣೆಯು ಭಾರತದ್ದಾಗಿದೆ ಮತ್ತು ಭಾರತದ ಪ್ರಜಾಪ್ರಭುತ್ವವು ಬಹಳ ಪ್ರಬುದ್ಧವಾಗಿದೆ. ಆರೋಗ್ಯಕರ ಸಂಪ್ರದಾಯಗಳನ್ನು ಹೊಂದಿದೆ ಮತ್ತು ಭಾರತದ ಮತದಾರರು ಯಾವುದೇ ಹೊರಗಿನ ಚಟುವಟಿಕೆಗಳಿಂದ ಪ್ರಭಾವಿತರಾದ ಮತದಾರರಲ್ಲ" ಎಂದು ಅವರು ಹೇಳಿದರು.