ನವದೆಹಲಿ: ಲೋಕಸಭಾ ಚುನಾವಣೆ ಅಂತಿಮ ಹಂತ ತಲುಪಿರುವಂತೆಯೇ ತಾನು ಚುನಾವಣೋತ್ತರ ಸಮೀಕ್ಷೆ ಕುರಿತು ಟಿವಿ ವಾಹಿನಿಗಳ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿದೆ.
ಟಿವಿ ಚಾನೆಲ್‌ಗಳಲ್ಲಿ ಲೋಕಸಭೆ ಚುನಾವಣೆಯ ಎಕ್ಸಿಟ್ ಪೋಲ್ (exit poll) ಚರ್ಚೆಗಳಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ನಿರ್ಧರಿಸಿದ್ದು, ಟಿಆರ್‌ಪಿಗಾಗಿ ಊಹಾಪೋಹ ಮತ್ತು ಪರಸ್ಪರ ವಾಗ್ದಾಳಿಯಲ್ಲಿ ತೊಡಗಿಸಿಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದೆ.
ಈ ಬಗ್ಗೆ ಕಾಂಗ್ರೆಸ್ ವಕ್ತಾರ ಮತ್ತು ಪಕ್ಷದ ಮಾಧ್ಯಮ ವಿಭಾಗದ ಅಧ್ಯಕ್ಷ ಪವನ್ ಖೇರಾ ಮಾಹಿತಿ ನೀಡಿದ್ದು, ''ಮತದಾರರು ಮತ ಚಲಾಯಿಸಿದ್ದಾರೆ ಮತ್ತು ಅವರ ತೀರ್ಪು ಖಚಿತವಾಗಿದೆ. ಫಲಿತಾಂಶಗಳು ಜೂನ್ 4 ರಂದು ಹೊರಬೀಳುತ್ತವೆ. ಅದಕ್ಕೂ ಮೊದಲು, ಟಿವಿ ಚಾನೆಲ್ ಗಳ ಟಿಆರ್‌ಪಿಗಾಗಿ ಊಹಾಪೋಹ ಮತ್ತು ಪರಸ್ಪರ ವಾಗ್ದಾಳಿಯಾಗುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನಮಗೆ ಯಾವುದೇ ಕಾರಣವಿಲ್ಲ" ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪವನ್ ಖೇರಾ, ''ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಎಕ್ಸಿಟ್ ಪೋಲ್‌ಗಳ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ. ಯಾವುದೇ ಚರ್ಚೆಯ ಉದ್ದೇಶವು ಜನರಿಗೆ ವಿಷಯ ತಿಳಿಸುವುದು. ನಾವು ಜೂನ್ 4 ರಿಂದ ಸಂತೋಷದಿಂದ ಚರ್ಚೆಗಳಲ್ಲಿ ಭಾಗವಹಿಸುತ್ತೇವೆ" ಎಂದು ಟ್ವೀಟ್ ಮಾಡಿದ್ದಾರೆ.
ಮೂಲಗಳ ಪ್ರಕಾರ ಕಾಂಗ್ರೆಸ್ ಪಕ್ಷದೊಳಗೆ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.