ರಾಂಚಿ: ಜೆಎಂಎಂ ನಾಯಕ ಹೇಮಂತ್ ಸೊರೆನ್ ಅವರು ಗುರುವಾರ ಜಾರ್ಖಂಡ್‌ನ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇಂದು ರಾಂಚಿಯ ಮೊರಾಬಾಡಿ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಜಾರ್ಖಂಡ್ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅವರು 49 ವರ್ಷದ ಬುಡಕಟ್ಟು ನಾಯಕ ಸೊರೆನ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ರಾಂಚಿಯಲ್ಲಿ ನಡೆದ ಈ ಭವ್ಯ ಸಮಾರಂಭದಲ್ಲಿ ಇಂಡಿಯಾ ಬ್ಲಾಕ್ ನಾಯಕರು ಸಹ ಭಾಗವಹಿಸಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಉಪಸ್ಥಿತರಿದ್ದರು.
ಜೆಎಂಎಂ ನಾಯಕ ಸೊರೆನ್ ಅವರು ನಾಲ್ಕನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಜೆಎಂಎಂ ಅಧ್ಯಕ್ಷ ಮತ್ತು ಅವರ ತಂದೆ ಶಿಬು ಸೊರೆನ್ ಅವರನ್ನು ಭೇಟಿಯಾದರು.
ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟ 56 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ ನೇತೃತ್ವದ ಎನ್‌ಡಿಎ 24 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.