ಹೈದರಾಬಾದ್: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್(ಎಚ್ ಸಿಎ)ನಲ್ಲಿನ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಕಾಂಗ್ರೆಸ್ ಮುಖಂಡ ಮೊಹಮ್ಮದ್ ಅಜರುದ್ದೀನ್ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ಜಾರಿ ಮಾಡಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.
61 ವರ್ಷದ ಮಾಜಿ ಸಂಸದ(MP) ಅಜರುದ್ದೀನ್ ಅವರಿಗೆ ಅಕ್ಟೋಬರ್ 3 ರಂದು ಕೇಂದ್ರ ತನಿಖಾ ಸಂಸ್ಥೆಯ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ನವೆಂಬರ್‌ನಲ್ಲಿ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿನ ಹಣಕಾಸು ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಇಡಿ ಶೋಧ ನಡೆಸಿತ್ತು. ಅದರ ತನಿಖೆಯ ಭಾಗವಾಗಿ ಕಾಂಗ್ರೆಸ್ ನಾಯಕನಿಗೆ ನೋಟಿಸ್ ನೀಡಲಾಗಿದೆ.
ಎಚ್ ಸಿಎನ 20 ಕೋಟಿ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತೆಲಂಗಾಣ ಭ್ರಷ್ಟಾಚಾರ ವಿರೋಧಿ ಬ್ಯೂರೋ(ಎಸಿಬಿ) ದಾಖಲಿಸಿದ್ದ ಮೂರು ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ.