ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಯ ಮತದಾನ ಶನಿವಾರ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದ್ದು, ಶೇ.60 ಕ್ಕೂ ಹೆಚ್ಚು ಮತದಾನ ದಾಖಲಾಗಿದೆ.
ಆಡಳಿತಾರೂಢ ಬಿಜೆಪಿ ಹ್ಯಾಂಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ ಮತ್ತು ಕಾಂಗ್ರೆಸ್ ದಶಕದ ನಂತರ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ.
ಇಂದು ಸಂಜೆ 6 ಗಂಟೆಗೆ ಮತದಾನ ಮುಕ್ತಾಯಗೊಂಡಿದ್ದು, ನುಹ್‌ನಲ್ಲಿ ಇಬ್ಬರು ಅಭ್ಯರ್ಥಿಗಳ ಬೆಂಬಲಿಗರ ನಡುವಿನ ಘರ್ಷಣೆ ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತವಾಗಿತ್ತು.
ಸಂಜೆ 5 ಗಂಟೆ ವರೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಶೇ.61ರಷ್ಟು ಮತದಾನ ದಾಖಲಾಗಿದ್ದು, ಎಲ್ಲ ಮಾಹಿತಿ ಬಂದ ಬಳಿಕ ಮತದಾನ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ.
ಬಿಜೆಪಿ, ಕಾಂಗ್ರೆಸ್, ಐಎನ್‌ಎಲ್‌ಡಿ-ಬಿಎಸ್‌ಪಿ ಮತ್ತು ಜೆಜೆಪಿ-ಆಜಾದ್ ಸಮಾಜ ಪಾರ್ಟಿ ಮೈತ್ರಿಕೂಟಗಳು ಮತ್ತು ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರಮುಖ ಪಕ್ಷಗಳಾಗಿವೆ.
101 ಮಹಿಳೆಯರು ಮತ್ತು 464 ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 1,031 ಅಭ್ಯರ್ಥಿಗಳು ಕಣದಲ್ಲಿದ್ದು, ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಬಿಜೆಪಿಯ ಅನಿಲ್ ವಿಜ್ ಮತ್ತು ಒಪಿ ಧಂಕರ್, ಕಾಂಗ್ರೆಸ್‌ನ ಭೂಪಿಂದರ್ ಸಿಂಗ್ ಹೂಡಾ ಮತ್ತು ವಿನೇಶ್ ಫೋಗಟ್, ಐಎನ್‌ಎಲ್‌ಡಿಯ ಅಭಯ್ ಸಿಂಗ್ ಚೌತಾಲಾ ಮತ್ತು ಜೆಜೆಪಿಯ ದುಶ್ಯಂತ್ ಚೌತಾಲಾ ಅವರು ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಹರಿಯಾಣದ 90 ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದು, ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.