ಮುಂಬೈ: ಹಿಂದುತ್ವವಾದಿ ವಿನಾಯಕ್ ದಾಮೋದರ್ ಸಾವರ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಸಂಬಂಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಗೆ ಪುಣೆಯ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಪುಣೆ ನ್ಯಾಯಾಲಯ ಶುಕ್ರವಾರ ರಾಹುಲ್ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದು, ಅಕ್ಟೋಬರ್ 23 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಹೇಳಿದೆ.
ಕಳೆದ ವರ್ಷ ಸಾವರ್ಕರ್ ಅವರ ಮೊಮಗ ಸತ್ಯಕಿ ಸಾವರ್ಕರ್ ಅವರು ರಾಹಲ್ ಗಾಂಧಿ ವಿರುದ್ಧ ಪುಣೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಕಳೆದ ತಿಂಗಳು ಈ ಪ್ರಕರಣವು ಪ್ರಥಮ ದರ್ಜೆಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.
ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯದ ಜಂಟಿ ಸಿವಿಲ್ ನ್ಯಾಯಾಧೀಶ ಹಾಗೂ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಪ್ರಥಮ ದರ್ಜೆ) ಅಮೋಲ್ ಶಿಂಧೆ ಅವರು ರಾಹುಲ್ ಗಾಂಧಿಗೆ ಸಮನ್ಸ್ ಜಾರಿಗೊಳಿಸಿದ್ದು, ಅವರ ವಿರುದ್ಧ ದಾಖಲಾಗಿರುವ ಭಾರತೀಯ ದಂಡ ಸಂಹಿತೆಯ ಶಿಕ್ಷಾರ್ಹ ಸೆಕ್ಷನ್ ಆದ 500 (ಮಾನಹಾನಿ) ಸಂಬಂಧ ಅವರ ಖುದ್ದು ಹಾಜರಿ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಅಕ್ಟೋಬರ್ 23ರಂದು ನ್ಯಾಯಾಲಯದೆದುರು ಖುದ್ದಾಗಿ ಹಾಜರಾಗಬೇಕಿದೆ ಎಂದು ಸತ್ಯಕಿ ಸಾವರ್ಕರ್ ಅವರನ್ನು ಪ್ರತಿನಿಧಿಸುತ್ತಿರುವ ವಕೀಲ ಸಂಗ್ರಾಮ್ ಕೊಲ್ಹಾತ್ಕರ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮಾರ್ಚ್ 2023ರಲ್ಲಿ ಲಂಡನ್ ಗೆ ತೆರಳಿದ್ದ ರಾಹುಲ್ ಗಾಂಧಿ ಅವರು, ತಮ್ಮ ಭಾಷಣದಲ್ಲಿ ವಿ.ಡಿ.ಸಾವರ್ಕರ್ ಅವರು ತಮ್ಮ ಪುಸ್ತಕವೊಂದರಲ್ಲಿ ನಾನು ಹಾಗೂ ನನ್ನ ಇನ್ನಿತರ ಐದಾರು ಮಂದಿ ಸ್ನೇಹಿತರು ಒಮ್ಮೆ ಮುಸ್ಲಿಂ ವ್ಯಕ್ತಿಯನ್ನು ಥಳಿಸಿದ್ದೆವು ಹಾಗೂ ನಾನು ಅದರಿಂದ ಸಂತಸಗೊಂಡಿದ್ದೆ ಎಂದು ಬರೆದಿದ್ದಾರೆ ಎಂದು ಹೇಳಿದ್ದರು. ಆದರೆ, ಸಾವರ್ಕರ್ ಅವರು ಆ ರೀತಿ ಎಲ್ಲಿಯೂ ಬರೆದಿಲ್ಲ. ರಾಹುಲ್ ಅವರ ಹೇಳಿಕೆ ಕಾಲ್ಪನಿಕ, ಸುಳ್ಳು ದುರುದ್ದೇಷದಿಂದ ಕೂಡಿದೆ ಎಂದು ಸತ್ಯಕಿ ಸಾವರ್ಕರ್ ಅವರು ತಮ್ಮ ದೂರಿನಲ್ಲಿ ಹೇಳಿದ್ದರು.