ಡೆಹ್ರಾಡೂನ್: ಹೈಬಾಕ್ಸ್ ಆ್ಯಪ್ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಯೂಟ್ಯೂಬರ್ ಸೌರಭ್ ಜೋಶಿ ಅವರಿಗೆ ನೋಟಿಸ್ ನೀಡಿದೆ. ಭಾರತದಾದ್ಯಂತ 30,000 ಕ್ಕೂ ಹೆಚ್ಚು ಜನರು 1,000 ಕೋಟಿ ರೂಪಾಯಿ ವಂಚನೆಗೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಉತ್ತರಾಖಂಡದ ಹಲ್ದಾನಿ ಮೂಲದ ಸೌರಭ್ ಜೋಶಿ, ಈ ಪ್ರಕರಣದಲ್ಲಿ ವಿಚಾರಣೆಗೆ ಕರೆಸಲಾದ ಹಲವಾರು ಸೋಷಿಯಲ್ ಮೀಡಿಯಾ ಇನ್ ಫ್ಲೂಯೆನ್ಸರ್ ಗಳಲ್ಲಿ ಸೇರಿದ್ದಾರೆ. ಅವರು ಹೈಬಾಕ್ಸ್ ಆ್ಯಪ್ ಪರ ಪ್ರಚಾರ ಮಾಡಿ, ಹೂಡಿಕೆದಾರರನ್ನು ಆಮಿಷವೊಡ್ಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ದೆಹಲಿ ಪೊಲೀಸ್‌ನ ಐಎಫ್‌ಎಸ್‌ಒ ಘಟಕದ ತನಿಖೆಯಿಂದ ದೇಶದಾದ್ಯಂತ ಹೈಬಾಕ್ಸ್ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಲ್ದ್ವಾನಿ ವೃತ್ತದ ಅಧಿಕಾರಿ ನಿತಿನ್ ಲೊಹಾನಿ, ತನಿಖೆಗೆ ಸಹಕಾರಕ್ಕಾಗಿ ನಾವು ದೆಹಲಿ ಪೊಲೀಸರಿಂದ ಸೂಚನೆಗಳನ್ನು ಸ್ವೀಕರಿಸಿಲ್ಲ, ನಾವು ಪೊಲೀಸ್ ಇಲಾಖೆಯ ನಿರ್ದೇಶನಗಳಿಗೆ ಸಹಾಯವನ್ನು ಮಾತ್ರ ನೀಡುತ್ತೇವೆ ಎಂದು ಹೇಳಿದರು.
ಸೈಬರ್ ಪೊಲೀಸರ ಪ್ರಕಾರ, ಹೈಬಾಕ್ಸ್ ಅಪ್ಲಿಕೇಶನ್ ಗೂಗಲ್ ಪ್ಲೇ ಮತ್ತು ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ. ಸ್ಕ್ಯಾಮರ್‌ಗಳು ಬಳಕೆದಾರರಿಗೆ ಅವರು ಬಯಸಿದ ವಸ್ತುಗಳನ್ನು ರಹಸ್ಯ ಪೆಟ್ಟಿಗೆಗಳಲ್ಲಿ ಇರಿಸಬಹುದು ಮತ್ತು ಉಳಿದವುಗಳನ್ನು ಲಾಭದಲ್ಲಿ ಮಾರಾಟ ಮಾಡಬಹುದು ಎಂದು ಭರವಸೆ ನೀಡಿದ್ದಾರ. ಬಾಕ್ಸ್ ತೆರೆಯಲು ಸಾಧ್ಯವಾಗದಿದ್ದರೆ, ಬಳಕೆದಾರರಿಗೆ ಪೂರ್ಣ ಮರುಪಾವತಿಯನ್ನು ಭರವಸೆ ನೀಡಲಾಗಿತ್ತು. ವರದಿ ಪ್ರಕಾರ ಹೈಬಾಕ್ಸ್ ಮೊಬೈಲ್ ಆ್ಯಪ್ನಲ್ಲಿ ಹೂಡಿಕೆ ಮಾಡುವ ಹಣಕ್ಕೆ ದಿನಕ್ಕೆ ಶೇ. 1ರಿಂದ 5ರಷ್ಟು ಬಡ್ಡಿ ನೀಡುವ ಆಫರ್ ನೀಡಲಾಗಿತ್ತು. ಅಂದರೆ ತಿಂಗಳಿಗೆ ಶೇ. 30ರಿಂದ ಶೇ 150ರಷ್ಟು ಬಡ್ಡಿ ಎಂದರೆ ತೀರಾ ಅಸಹಜ ರಿಟರ್ನ್ಸ್ ಇದಾಗಿದೆ. ಲಾಭದ ಭರವಸೆ ನೀಡಿ ಹೂಡಿಕೆದಾರರನ್ನು ವಂಚಿಸಲು ಹಗರಣಗಾರರು ಹೈಬಾಕ್ಸ್ ಆ್ಯಪ್ ಬಳಸುತ್ತಿದ್ದರು ಎಂದು ಸೈಬರ್ ಪೊಲೀಸರು ಬಹಿರಂಗಪಡಿಸಿದ್ದಾರೆ. ತಮ್ಮ ಮಗ ಯಾವುದೇ ತಪ್ಪು ಮಾಡಿಲ್ಲ, ಅವರ ಮಾನಹಾನಿ ಮಾಡಲು ಈ ಪ್ರಕರಣವನ್ನು ಸಂಚಲನಗೊಳಿಸಲಾಗುತ್ತಿದೆ ಎಂದು ಸೌರಭ್ ಜೋಶಿ ತಂದೆ ಹರೀಶ್ ಆರೋಪಿಸಿದ್ದಾರೆ. ಸದ್ಯ ಸೌರಭ್ ದೆಹಲಿಯಲ್ಲಿದ್ದಾರೆ ಮತ್ತು ಏಜೆನ್ಸಿಯೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಾರೆ ಎಂದು ಹೇಳಿದ್ದಾರೆ.