ಮುಂಬೈ: ಬಾಂಗ್ಲಾದೇಶದ ರಾಜಕೀಯ ಅಸ್ಥಿರತೆಯು ಭಾರತವನ್ನು ಶತ್ರು ಎಂಬ ಅಪಾಯಕಾರಿ ನಿರೂಪಣೆಯನ್ನು ಪ್ರಚೋದಿಸಿದೆ. ಪಾಕಿಸ್ತಾನದ ಪರಮಾಣು ಶಕ್ತಿಯೊಂದಿಗೆ ಎರಡೂ ರಾಷ್ಟ್ರಗಳು ಅಪಾಯಕಾರಿ ಮೈತ್ರಿಯನ್ನು ರಚಿಸಿ ಭಾರತವನ್ನು ನಿಯಂತ್ರಿಸಲು ಪ್ರಯತ್ನಿಸಬಹುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ಹೇಳಿದ್ದಾರೆ.
ತಮ್ಮ ವಿಜಯದಶಮಿ ಭಾಷಣದಲ್ಲಿ ಅವರು, ಇಂತಹ ವಿಭಜಕ ಪ್ರಚಾರವು ಪ್ರಾದೇಶಿಕ ಸ್ಥಿರತೆಯನ್ನು ಹೇಗೆ ದುರ್ಬಲಗೊಳಿಸಿ ಹಗೆತನವನ್ನು ಹೇಗೆ ಉತ್ತೇಜಿಸುತ್ತದೆ ಎಂಬುದನ್ನು ಒತ್ತಿಹೇಳಿದರು.
ಪ್ರತಿ ವರ್ಷ, ಭಾಗವತ್ ಅವರ ವಿಜಯದಶಮಿ ಭಾಷಣವು ಸಂಘದ ಮುಖ್ಯಸ್ಥರಿಂದ ಕಾರ್ಯಕರ್ತರಿಗೆ ಮತ್ತು ಎಲ್ಲಾ ಅಂಗ ಸಂಸ್ಥೆಗಳಿಗೆ ಅತ್ಯಂತ ನಿರ್ಣಾಯಕ ಸಂದೇಶ ನೀಡುತ್ತದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ಇತ್ತೀಚಿನ ಹಿಂಸಾಚಾರವನ್ನು ಖಂಡಿಸಿದ ಭಾಗವತ್, ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಪುನರಾವರ್ತಿತ ದೌರ್ಜನ್ಯಗಳು ನಡೆಯುತ್ತಿವೆ. ಹಿಂದೂಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಒಗ್ಗೂಡಬೇಕಿದೆ. ಈ ತೀವ್ರಗಾಮಿ ಹಿಂಸಾಚಾರ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಕೇವಲ ಹಿಂದೂಗಳು ಮಾತ್ರವಲ್ಲ, ಎಲ್ಲಾ ಅಲ್ಪಸಂಖ್ಯಾತರು ಅಪಾಯದಲ್ಲಿದ್ದಾರೆ. ಅವರಿಗೆ ಜಾಗತಿಕ ಹಿಂದೂ ಬೆಂಬಲದ ಅಗತ್ಯವಿದೆ. ಭಾರತ ಸರ್ಕಾರವು ಮಧ್ಯಪ್ರವೇಶಿಸಬೇಕು. ನಾವು ಎಲ್ಲೇ ಇದ್ದರೂ, ನಾವು ಒಗ್ಗಟ್ಟಿನಿಂದ ಅಧಿಕಾರವನ್ನು ಹೊಂದಿರಬೇಕು ಎಂದರು.
ಬಾಂಗ್ಲಾದೇಶದಲ್ಲಿ ದಬ್ಬಾಳಿಕೆಯ ಮೂಲಭೂತವಾದಿ ಸ್ವಭಾವವು ಇರುವವರೆಗೂ, ಅಪಾಯದ ಕತ್ತಿಯು ಹಿಂದೂಗಳು ಸೇರಿ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ನೆತ್ತಿ ಮೇಲೆ ತೂಗುತ್ತಿರುತ್ತದೆ. ಬಾಂಗ್ಲಾದೇಶದಲ್ಲಿ ನೆಲೆಸಿರುವ ಹಿಂದೂ ಸಮುದಾಯದ ಮೇಲೆ ಅಪ್ರಚೋದಿತ ಕ್ರೂರ ದೌರ್ಜನ್ಯಗಳು ಪುನರಾವರ್ತನೆಯಾದವು. ಬಾಂಗ್ಲಾದೇಶದಲ್ಲಿ ಭಾರತವು ಬಾಂಗ್ಲಾದೇಶ ವಿರೋಧಿ ಶಕ್ತಿಯಾಗಿದೆ ಎಂಬ ನಿರ್ದಿಷ್ಟ ನಿರೂಪಣೆಯು ಚಲಾವಣೆಯಲ್ಲಿದೆ. ಪಾಕಿಸ್ತಾನ ತಮ್ಮ ನಿಜವಾದ ಸ್ನೇಹಿತ ಎಂದು ಅವರು ಹೇಳುತ್ತಾರೆ. ಪಾಕಿಸ್ತಾನವು ಪರಮಾಣು ಶಕ್ತಿಗಳನ್ನು ಹೊಂದಿರುವುದರಿಂದ, ಪಾಕಿಸ್ತಾನ-ಬಾಂಗ್ಲಾದೇಶದ ಸಂಯೋಜನೆಯು ಭಾರತದೊಂದಿಗೆ ವ್ಯವಹರಿಸಬಹುದು ಎಂದರು.
ಭಯ ಮತ್ತು ಆಕ್ರಮಣಶೀಲತೆಯ ಆಧಾರದ ಮೇಲೆ ಮೈತ್ರಿಗಳನ್ನು ರಚಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳಿಂದ ಭಾರತದ ಉದಯಕ್ಕೆ ಸವಾಲು ಎದುರಾಗಿದೆ ಎಂದು ಭಾಗವತ್ ಎಚ್ಚರಿಸಿದ್ದಾರೆ. ಆದಾಗ್ಯೂ, ಭಾರತವು ದೃಢವಾಗಿ ಒಗ್ಗಟ್ಟಿನಿಂದ ಮತ್ತು ಯಾವುದೇ ಬೆದರಿಕೆಯನ್ನು ಎದುರಿಸಲು ಸಿದ್ಧವಾಗಿರುವುದರಿಂದ ಈ ಪ್ರಯತ್ನಗಳು ವಿಫಲಗೊಳ್ಳುತ್ತವೆ.
ಕಲ್ಚರಲ್ ಮಾರ್ಕ್ಸಿಸ್ಟ್ ಕುತಂತ್ರದ ಅರಿವಿರಲಿ: ಭಾಗವತ್ ಕಿವಿಮಾತು
ಸಮಾಜದ ಮನಸ್ಸನ್ನು ರೂಪಿಸುವ ವ್ಯವಸ್ಥೆಗಳು ಮತ್ತು ಸಂಸ್ಥೆಗಳು, ಉದಾ. ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಣ ಸಂಸ್ಥೆಗಳು. ಸಂವಹನ ಮಾಧ್ಯಮ, ಬೌದ್ಧಿಕ ಸಂವಾದ ಇತ್ಯಾದಿಗಳನ್ನು ತಮ್ಮ ಪ್ರಭಾವಕ್ಕೆ ತಂದು ಅವುಗಳ ಮೂಲಕ ಸಮಾಜದ ವಿಚಾರ, ಸಂಸ್ಕಾರ ಮತ್ತು ನಂಬಿಕೆಗಳನ್ನು ನಾಶಪಡಿಸುವುದು ಅವರ ಕಾರ್ಯ ವೈಖರಿಯ ಮೊದಲ ಹೆಜ್ಜೆಯಾಗಿದೆ ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದರು.
‘ಡೀಪ್ ಸ್ಟೇಟ್’, ‘ವೋಕಿಸಂ’, ‘ಕಲ್ಚರಲ್ ಮಾರ್ಕ್ಸಿಸ್ಟ್’ ಇಂತಹ ಶಬ್ದಗಳು ಇತ್ತೀಚೆಗಿನ ದಿನಗಳಲ್ಲಿ ಚರ್ಚೆಯಲ್ಲಿವೆ. ವಾಸ್ತವವಾಗಿ, ಅವರು ಎಲ್ಲಾ ಸಾಂಸ್ಕೃತಿಕ ಸಂಪ್ರದಾಯಗಳ ಘೋಷಿತ ಶತ್ರುಗಳು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಟೀಕಿಸಿದರು. ನಾಗಪುರದ ಕಚೇರಿಯಲ್ಲಿ ವಿಜಯದಶಮಿ ಪೂಜೆಯ ನಂತರ ಭಾಷಣ ಮಾಡಿದ ಅವರು, ಸಾಂಸ್ಕೃತಿಕ ಮೌಲ್ಯಗಳು, ಸಂಪ್ರದಾಯಗಳು ಮತ್ತು ಯಾವುದನ್ನು ಒಳ್ಳೆಯದು ಅಥವಾ ಮಂಗಳಕರವೆಂದು ಪರಿಗಣಿಸಲಾಗಿದೆಯೋ ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಈ ಗುಂಪಿನ ಕಾರ್ಯವೈಖರಿಯ ಒಂದು ಭಾಗವಾಗಿದೆ ಎಂದು ಆರೋಪಿಸಿದರು.
ಆರ್ ಜಿ ಕಾರ್ ಘಟನೆ ನಾಚಿಕೆಗೇಡು: 'ಮಾತೃವತ್ ಪರದಾರೇಶು' (ಎಲ್ಲಾ ಮಹಿಳೆಯರನ್ನು ತಾಯಿಯಂತೆ ನೋಡುವುದು) ಅನ್ನು ಎತ್ತಿಹಿಡಿಯುವ ಸಂಸ್ಕೃತಿಯಲ್ಲಿ, ಕೋಲ್ಕತ್ತಾದ ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆ ಮೇಲೆ ಅತ್ಯಾಚಾರ-ಕೊಲೆ ಘಟನೆಗಳು ಭಾರತೀಯ ಸಮಾಜಕ್ಕೆ ಕಳಂಕವಾಗಿದೆ ಎಂದು ಭಾಗವತ್ ಹೇಳಿದರು. ರಾಜ್ಯ ಸರ್ಕಾರವು ಒಂದು ರೀತಿಯಲ್ಲಿ ಅಪರಾಧಿಗಳನ್ನು ರಕ್ಷಿಸುವ ತನ್ನ ಪ್ರಯತ್ನಗಳು ಅಪರಾಧ, ರಾಜಕೀಯ ಮತ್ತು ವಿಷಕಾರಿ ಸಂಸ್ಕೃತಿಯ ಅಪಾಯಕಾರಿ ಸಂಬಂಧವನ್ನು ಬಹಿರಂಗಪಡಿಸುತ್ತದೆ. ನಾವು ನಮ್ಮ ಮೌಲ್ಯಗಳನ್ನು ಮರಳಿ ಪಡೆಯಬೇಕು ಮತ್ತು ಈ ನೈತಿಕ ಅವನತಿಯ ವಿರುದ್ಧ ದೃಢವಾಗಿ ನಿಲ್ಲಬೇಕು.
ವಿವಿಧ ಸಂಸ್ಥೆಗಳು ಹರಡುತ್ತಿರುವ ವಿಕೃತ ಪ್ರಚಾರ ಮತ್ತು ಮೌಲ್ಯಗಳ ಅವನತಿಯು ಭಾರತದ ಯುವ ಪೀಳಿಗೆಯ ಮನಸ್ಸು, ಮಾತು ಮತ್ತು ಕಾರ್ಯಗಳನ್ನು ಭ್ರಷ್ಟಗೊಳಿಸುತ್ತಿದೆ ಎಂದು ಅವರು ಹೇಳಿದರು. “ಮಕ್ಕಳು ಈಗ ಮೊಬೈಲ್ ಫೋನ್‌ಗಳಿಗೆ ದಾಸರಾಗಿದ್ದಾರೆ. ನಮ್ಮ ಮನೆಗಳು ಮತ್ತು ಸಮಾಜದಲ್ಲಿ ಹಾನಿಕಾರಕ ಜಾಹೀರಾತುಗಳು ಮತ್ತು ವಿಕೃತ ದೃಶ್ಯಗಳ ಮೇಲೆ ಕಾನೂನು ನಿಯಂತ್ರಣದ ತುರ್ತು ಅಗತ್ಯವಿದೆ ಎಂದರು.
ಮಾದಕ ವ್ಯಸನದ ಹೆಚ್ಚಳವು ನಮ್ಮ ಸಮಾಜವನ್ನು ಒಳಗಿನಿಂದ ಟೊಳ್ಳುಗೊಳಿಸುತ್ತಿದೆಯ ನಾವು ಸದ್ಗುಣವನ್ನು ಉತ್ತೇಜಿಸುವ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಬೇಕು ಎಂದು ಹೇಳಿದರು.