ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದರ್ರ್ಬಾಲ್ ಜಿಲ್ಲೆಯಲ್ಲಿ ನಡೆದ ಉಗ್ರದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ರೆಸಿಸ್ಟೆನ್ಸ್ ಫ್ರಂಟ್ (TRF) ವಹಿಸಿಕೊಂಡಿದೆ.
ಓರ್ವ ವೈದ್ಯ ಸೇರಿದಂತೆ 7 ಮಂದಿ ಮುಗ್ಧ ನಾಗರಿಕರ ಮೇಲೆ ಭಾನುವಾರ ನಡೆದ ಭಯೋತ್ಪಾದಕ ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ರೆಸಿಸ್ಟೆನ್ಸ್ ಫ್ರಂಟ್ (TRF) ಹೊತ್ತುಕೊಂಡಿದೆ ಎಂದು ಸೇನಾ ಅಧಿಕೃತ ಮೂಲಗಳು ದೃಢಪಡಿಸಿವೆ.
ಪಾಕಿಸ್ತಾನ ಮೂಲದ TRF ಮುಖ್ಯಸ್ಥ ಶೇಖ್ ಸಜ್ಜಾದ್ ಗುಲ್ ಈ ದಾಳಿಯ ಮಾಸ್ಟರ್ ಮೈಂಡ್ ಎಂದು ಮೂಲಗಳು ತಿಳಿಸಿವೆ. ಆತನ ಸೂಚನೆಯ ಮೇರೆಗೆ, TRF ನ ಸ್ಥಳೀಯ ಮಾಡ್ಯೂಲ್ ಸಕ್ರಿಯವಾಗಿ ಈ ಕಾರ್ಯಾಚರಣೆ ನಡೆಸಿದೆ ಎಂದು ಹೇಳಲಾಗಿದೆ.
ಮೊದಲ ಬಾರಿಗೆ ಕಾಶ್ಮೀರಿ ಮತ್ತು ಕಾಶ್ಮೀರೇತರ ಜನರನ್ನು ಒಟ್ಟಿಗೆ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದ್ದು, TRF ಸಂಘಟನೆಯ ಎರಡರಿಂದು ಮೂರು ಉಗ್ರರು ಕಾಶ್ಮೀರದ ಗಂದರ್ಬಾಲ್ ನ ಗಗನ್ಗಿರ್ ಪ್ರದೇಶದಲ್ಲಿ ಏಳು ನಾಗರಿಕರನ್ನು ಹತ್ಯೆಗೈದಿದ್ದಾರೆ.
ಸೇನಾ ಮೂಲಗಳ ಪ್ರಕಾರ TRF ನ ಸ್ಥಳೀಯ ಘಟಕ ಕಳೆದ ಒಂದು ತಿಂಗಳಿನಿಂದ ಅಪರಾಧದ ಸ್ಥಳವನ್ನು ಪರಿಶೀಲಿಸುತ್ತಿತ್ತು. ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಈ ಭಯೋತ್ಪಾದಕ ಸಂಘಟನೆ ಕಳೆದ ಒಂದೂವರೆ ವರ್ಷಗಳಲ್ಲಿ ಕಾಶ್ಮೀರಿ ಪಂಡಿತರು, ಸಿಖ್ಖರು ಮತ್ತು ಸ್ಥಳೀಯರಲ್ಲದವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.
ಈ ಮಾಡ್ಯೂಲ್ ನ ಕಾರ್ಯತಂತ್ರದಲ್ಲಿ ಇದು ಒಂದು ದೊಡ್ಡ ಬದಲಾವಣೆಯಾಗಿದ್ದು ಏಕಕಾಲದಲ್ಲಿ ಸ್ಥಳೀಯವಲ್ಲದ ಅಭಿವೃದ್ಧಿ ಯೋಜನೆಗಳನ್ನು ಗುರಿಯಾಗಿಸಿಕೊಂಡಿದೆ.
ಏತನ್ಮಧ್ಯೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಸೋಮವಾರ ಭಯೋತ್ಪಾದಕ ದಾಳಿಯ ಸ್ಥಳಕ್ಕೆ ಭೇಟಿ ನೀಡಿ ದಾಳಿಯ ಬಗ್ಗೆ ತಮ್ಮದೇ ಆದ ಮೌಲ್ಯಮಾಪನ ಮಾಡುತ್ತಿದ್ದಾರೆ.
ಭಯೋತ್ಪಾದಕರಿಂದ ಕೊಲ್ಲಲ್ಪಟ್ಟವರಲ್ಲಿ ಶ್ರೀನಗರ-ಸೋನಾಮಾರ್ಗ್ ಅನ್ನು ಸರ್ವಋತು ರಸ್ತೆಯನ್ನಾಗಿ ಮಾಡಲು ಗಗನ್ಗಿರ್ ಮತ್ತು ಸೋನಾಮಾರ್ಗ್ ನಡುವೆ ಸುರಂಗವನ್ನು ನಿರ್ಮಿಸಲು ಕೆಲಸ ಮಾಡುತ್ತಿದ್ದ ಸ್ಥಳೀಯರು ಮತ್ತು ಸ್ಥಳೀಯರಲ್ಲದ ಕಾರ್ಮಿಕರು ಎಂದು ಹೇಳಲಾಗಿದೆ.
ಮೃತಪಟ್ಟ ನಾಗರಿಕರ ಪಟ್ಟಿಯಲ್ಲಿ ಬಿಹಾರದ ಫಹೀಮ್ ನಾಸಿರ್ (ಸೇಫ್ಟಿ ಮ್ಯಾನೇಜರ್), ಅಂಗಿಲ್ ಶುಕ್ಲಾ (ಮಧ್ಯಪ್ರದೇಶದ ಮೆಕ್ಯಾನಿಕಲ್ ಮ್ಯಾನೇಜರ್), ಬಿಹಾರದ ಮೊಹಮ್ಮದ್ ಹನೀಫ್, ಕಾಶ್ಮೀರದ ಬದ್ಗಾಮ್ ಜಿಲ್ಲೆಯ ಡಾ.ಶಹನವಾಜ್, ಬಿಹಾರದ ಕಲೀಮ್, ಜಮ್ಮುವಿನ ಡಿಸೈನರ್ ಶಶಿ ಅಬ್ರೋಲ್ ಮತ್ತು ಪಂಜಾಬ್ ನ ಗುರುದಾಸ್ಪುರದ ರಿಗ್ಗರ್ನ ಗುರ್ಮೀತ್ ಸಿಂಗ್ ಎಂದು ಗುರುತಿಸಲಾಗಿದೆ.
ಉಗ್ರರ ದಾಳಿಯಲ್ಲಿ ಗಾಯಗೊಂಡ ಐವರು ಶ್ರೀನಗರದ ಸ್ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರೆದಿದ್ದು, ಭಯೋತ್ಪಾದಕರನ್ನು ಪತ್ತೆಹಚ್ಚಲು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಭಾನುವಾರ ರಾತ್ರಿ 8.15 ರ ಸುಮಾರಿಗೆ ಈ ದಾಳಿ ನಡೆದಿದೆ.
ಹೇಡಿತನದ ಕೃತ್ಯ ಎಂದ ಅಮಿತ್ ಶಾ
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಜಮ್ಮು ಮತ್ತು ಕಾಶ್ಮೀರದ ಗಗಾಂಗೀರ್ನಲ್ಲಿ ನಾಗರಿಕರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿ ಹೇಡಿತನದ ಹೇಡಿತನದ ಕೃತ್ಯವಾಗಿದೆ. ಈ ಘೋರ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಬಿಡುವುದಿಲ್ಲ ಮತ್ತು ನಮ್ಮ ಭದ್ರತಾ ಪಡೆಗಳಿಂದ ಕಠಿಣ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ, "ತೀವ್ರ ದುಃಖದ ಈ ಕ್ಷಣದಲ್ಲಿ, ಮೃತರ ಕುಟುಂಬಗಳಿಗೆ ನನ್ನ ಪ್ರಾಮಾಣಿಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಹೇಡಿತನ ಎಂದ ಸಿಎಂ ಒಮರ್ ಅಬ್ದುಲ್ಲಾ
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ಘಟನೆಯನ್ನು ಭಯೋತ್ಪಾದಕರ ಕ್ರೂರ ಮತ್ತು ಹೇಡಿತನ ಎಂದು ಖಂಡಿಸಿದ್ದಾರೆ. "ಗಗಾಂಗೀರ್ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ ಅಂತಿಮವಲ್ಲ, ಏಕೆಂದರೆ ಸ್ಥಳೀಯ ಮತ್ತು ಸ್ಥಳೀಯರಲ್ಲದ ಹಲವಾರು ಗಾಯಗೊಂಡ ಕಾರ್ಮಿಕರು ಇದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಶ್ರೀನಗರದ ಸ್ಕಿಮ್ಸ್ಗೆ ಕಳುಹಿಸಲಾಗುತ್ತಿದ್ದು, ಗಾಯಾಳುಗಳು ಸಂಪೂರ್ಣ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.