ನವದೆಹಲಿ: ಬಿಜೆಪಿಯ ರಾಷ್ಟ್ರವ್ಯಾಪಿ ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ 26 ಲಕ್ಷಕ್ಕೂ ಹೆಚ್ಚು ಜನರು ಬಿಜೆಪಿಯ ಸದಸ್ಯರಾಗಿದ್ದಾರೆ. ಅಲ್ಪಸಂಖ್ಯಾತ ಸಮುದಾಯಗಳ ಸುಮಾರು ಆರು ಲಕ್ಷ ಜನರು ಆಫ್‌ಲೈನ್‌ನಲ್ಲಿ ಸದಸ್ಯತ್ವವನ್ನು ತೆಗೆದುಕೊಂಡಿದ್ದಾರೆ. ಇಲ್ಲಿಯವರೆಗೆ ಪಕ್ಷವು 10 ಕೋಟಿಗೂ ಹೆಚ್ಚು ಸದಸ್ಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಸದಸ್ಯತ್ವ ಅಭಿಯಾನವು ಅಲ್ಪಸಂಖ್ಯಾತ ಸಮುದಾಯಗಳು ಪಕ್ಷದಿಂದ ವಿಮುಖವಾಗಿಲ್ಲ ಎಂದು ಸೂಚಿಸುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕರು ಹೇಳಿದ್ದಾರೆ.
ಆರು ವರ್ಷಗಳಿಗೊಮ್ಮೆ ಸದಸ್ಯತ್ವ ಅಭಿಯಾನ ನಡೆಯುತ್ತದೆ. ಈ ಬಾರಿ, ಮಹಾರಾಷ್ಟ್ರ, ಜಾರ್ಖಂಡ್, ಹರಿಯಾಣ ಮತ್ತು ಜಮ್ಮು-ಕಾಶ್ಮೀರ ಹೊರತುಪಡಿಸಿ ದೇಶದಾದ್ಯಂತ ಅಕ್ಟೋಬರ್ 2 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿದ್ದರು. ಎರಡನೇ ಹಂತ ಅಕ್ಟೋಬರ್ 25 ರಂದು ಪ್ರಾರಂಭವಾಯಿತು.
ಈ ಹಿಂದೆ ಮುಸ್ಲಿಂ ಮತ್ತು ಇತರ ಸಮುದಾಯಗಳಿಂದ ಸಾವಿರಾರು ಮಂದಿಯನ್ನು ನೋಂದಣಿ ಮಾಡಿದ್ದ ಪಕ್ಷದ ಅಲ್ಪಸಂಖ್ಯಾತ ಮೋರ್ಚಾ ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಿಕೊಂಡಿದ್ದು, ಈ ಅಭಿಯಾನದಲ್ಲಿ 26,82,092 ಜನರು ಸದಸ್ಯರಾಗಿದ್ದಾರೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಮಂಗಳವಾರ ತಿಳಿಸಿದರು. ಹೊಸ ಸದಸ್ಯರಲ್ಲಿ ಸುಮಾರು ಶೇ.90 ರಷ್ಟು ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರಿದ್ದಾರೆ ಎಂದು ಅವರು ಹೇಳಿದರು.
ಉತ್ತರ ಪ್ರದೇಶದಿಂದ 6,12,916 ಪ್ರಾಥಮಿಕ ಸದಸ್ಯತ್ವಗಳನ್ನು ಆನ್‌ಲೈನ್ ಮೂಲಕ ಮಾಡಲಾಗಿದೆ. ನಂತರ ಅಸ್ಸಾಂನಿಂದ 3,55,388, ಮಧ್ಯಪ್ರದೇಶದಿಂದ 3,12,900, ಉತ್ತರಾಖಂಡದಿಂದ 2,61,000, ಗುಜರಾತ್‌ನಿಂದ 2,30,780, ಬಿಹಾರದಿಂದ 1,82,850, ರಾಜಸ್ಥಾನ 1,87,018, ಕೇರಳ 93,731, ಕರ್ನಾಟಕ 93,000, ದೆಹಲಿ 82,800, ತ್ರಿಪುರ 70,673 ಮತ್ತು ಛತ್ತೀಸ್‌ಗಢ 64,428 ಮಂದಿ ಸದಸ್ಯತ್ವ ಪಡೆದಿದ್ದಾರೆ. 26 ರಾಜ್ಯಗಳಲ್ಲಿ ಗುರಿ ಸಾಧಿಸಲು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಸದಸ್ಯತ್ವ ಅಭಿಯಾನ ನಡೆಸಿದ್ದೇವೆ ಎಂದು ಅವರು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯ ಅಭಿವೃದ್ಧಿಯ ರಾಜಕೀಯದ ಬಗ್ಗೆ ಮುಸ್ಲಿಮರು ಮತ್ತಿತರರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದೇವೆ. ಈಗ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯರಾಗಿದ್ದಾರೆ. ಪಕ್ಷದ ಪದಾಧಿಕಾರಿಗಳ ಚುನಾವಣೆಯಲ್ಲಿ ಭಾಗವಹಿಸಲು ಅವರು ಅರ್ಹರಾಗಿದ್ದಾರೆ. ಹೆಚ್ಚಿನ ಸಂಖ್ಯೆಯ ಇಸ್ಲಾಮಿಕ್ ಅಧ್ಯಯನದ ವಿದ್ವಾಂಸರು, ನಿವೃತ್ತ ಶಿಕ್ಷಕರು, ಧಾರ್ಮಿಕ ಬೋಧಕರು ಮತ್ತು ಇತರರು ಪಕ್ಷಕ್ಕೆ ಪ್ರಾಥಮಿಕ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ ಎಂದು ಅವರು ತಿಳಿಸಿದರು.