ಗಡ್ಚಿರೋಲಿ: ಸೆಲ್ಫಿ ಹುಚ್ಚಿಗೆ ಮತ್ತೊಂದು ಬಲಿಯಾಗಿದ್ದು ಕಾಡಾನೆ ಜೊತೆ ಫೋಟೋ ತೆಗೆದುಕೊಳ್ಳಲು ಹೋಗಿದ್ದ ಕಾರ್ಮಿಕನ ಮೇಲೆ ಆನೆ ದಾಳಿ ಮಾಡಿಕೊಂದು ಹಾಕಿದೆ.
ಮಹಾರಾಷ್ಟ್ರದ ಗಡ್ಚಿರೋಲಿಯ ಅಬಾಪುರ ಅರಣ್ಯದಲ್ಲಿ ಈ ಘಟನೆ ನಡೆದಿದ್ದು, ಮೃತ ಕಾರ್ಮಿಕನನ್ನು ಶ್ರೀಕಾಂತ್ ರಾಮಚಂದ್ರ ಸಾತ್ರೆ (24 ವರ್ಷ) ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ನವೆಗಾಂವ್ ನಿವಾಸಿಗಳಾದ ಶ್ರೀಕಾಂತ್ ರಾಮಚಂದ್ರ ಸಾತ್ರೆ ಮತ್ತು ಅವರ ಇಬ್ಬರು ಸ್ನೇಹಿತರು ಗುರುವಾರ ಬೆಳಗ್ಗೆ ಮಹಾರಾಷ್ಟ್ರದ ಗಡ್ಚಿರೋಲಿಯ ಅಬಾಪುರ ಅರಣ್ಯಕ್ಕೆ ಕಾಡಾನೆಯನ್ನು ನೋಡಲು ಹೋಗಿದ್ದರು. ಈ ವೇಳೆ ಶ್ರೀಕಾಂತ್ ರಾಮಚಂದ್ರ ಸಾತ್ರೆ ದೂರದಲ್ಲಿದ್ದ ಆನೆಯನ್ನು ನೋಡಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಆನೆ ಆತನ ಮೇಲೆ ದಾಳಿ ಮಾಡಿದೆ. ಆನೆ ಬರುತ್ತಿರವುದನ್ನು ನೋಡಿದ ಮೂವರೂ ಸ್ನೇಹಿತರು ಓಡಿದ್ದಾರೆಯಾದರೂ ಶ್ರೀಕಾಂತ್ ಮಾತ್ರ ಆನೆಗೆ ಸಿಕ್ಕಿಬಿದ್ದಿದ್ದಾನೆ.
ಈವೇಳೆ ಆತನನ್ನು ಹಿಡಿದ ಆನೆ ಸೊಂಡಿಲಿನಿಂದ ಎತ್ತಿ ನೆಲಕ್ಕೆ ಬಡಿದು ಆತನನ್ನು ತುಳಿದು ಕೊಂದು ಹಾಕಿದೆ. ಅಂದಹಾಗೆ ಶ್ರೀಕಾಂತ್ ಕೇಬಲ್ ಅಳವಡಿಕೆ ಕೆಲಸಕ್ಕಾಗಿ ನವೆಗಾಂವ್‌ನಿಂದ ತನ್ನ ಕೆಲವು ಸ್ನೇಹಿತರೊಂದಿಗೆ ಇಲ್ಲಿಗೆ ಬಂದಿದ್ದರು. ಇದೇ ವೇಳೆ ಎರಡು ದಿನಗಳ ಹಿಂದೆ ಮಂಗಳವಾರ ಚಿತ್ತಗಾಂಗ್ ಮತ್ತು ಗಡ್ಚಿರೋಲಿ ಅರಣ್ಯ ಪ್ರದೇಶದಿಂದ ಕಾಡಾನೆಗಳು ಹೊರಬರುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಮುಟ್ನೂರು ಅರಣ್ಯ ಪ್ರದೇಶದ ಅಬಾಪುರ ಅರಣ್ಯದಲ್ಲಿ ಆನೆ ಸಂಚರಿಸುತ್ತಿತ್ತು ಎನ್ನಲಾಗಿದೆ.
ಅದೇ ಸಮಯದಲ್ಲಿ, 23 ವರ್ಷದ ಶ್ರೀಕಾಂತ್ ಮತ್ತು ಅವನ ಇಬ್ಬರು ಸ್ನೇಹಿತರು ಕೆಲಸದ ನಿಮಿತ್ತ ಆ ಪ್ರದೇಶದಲ್ಲಿದ್ದರು. ನಡುವೆ ಆನೆ ವೀಕ್ಷಣೆಗೆ ಹೋಗಲು ನಿರ್ಧರಿಸಿ ಹೋಗಿದ್ದರು. ಶ್ರೀಕಾಂತ್ ದೂರದಿಂದಲೇ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ನಿರ್ಧರಿಸಿದಾಗ ಕೂಡಲೇ ಆನೆ ದಾಳಿ ಮಾಡಿ ತುಳಿದು ಹಾಕಿದೆ. ಇಬ್ಬರು ಸ್ನೇಹಿತರು ತಮ್ಮ ಪ್ರಾಣವನ್ನು ಉಳಿಸಿಕೊಂಡು ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ, ಆದರೆ ಶ್ರೀಕಾಂತ್ ಆನೆಗೆ ಸಿಕ್ಕಿ ಸಾವನ್ನಪ್ಪಿದ್ದಾರೆ.