ಕೋಲ್ಕತಾ: ಒಳನುಸುಳುವಿಕೆ ತಡೆಯಿಂದ ಮಾತ್ರ ಪಶ್ಚಿಮ ಬಂಗಾಳದಲ್ಲಿ ಶಾಂತಿ ನೆಲಸುವಂತೆ ಮಾಡಲು ಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಗಡಿಯಲ್ಲಿ ನಿರ್ಮಿಸಿರುವ ಪ್ರಯಾಣಿಕರ ನೂತನ ಟರ್ಮಿನಲ್ ಅನ್ನು ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ, 'ಪಶ್ಚಿಮ ಬಂಗಾಳದಲ್ಲಿ ಶಾಂತಿ ನೆಲಸಲು ಗಡಿಗಳಲ್ಲಿ ನುಸುಳುವಿಕೆ ಮೇಲೆ ನಿಯಂತ್ರಣ ಸಾಧಿಸುವುದು ಅತ್ಯಗತ್ಯವಾಗಿದೆ. 2026ರಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಕ್ರಮ ವಲಸೆಯನ್ನು ತಡೆಯಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, 'ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ದೇಶದಲ್ಲಿ ಶಾಂತಿ ನೆಲೆಸಲು ಭೂಬಂದರುಗಳು ಪ್ರಮುಖ ಪಾತ್ರವಹಿಸುತ್ತದೆ. ಬಾಂಗ್ಲಾದೇಶ ಮತ್ತು ಭಾರತದ ಸಂಬಂಧ ಉತ್ತಮವಾಗಿರಲು ಗಡಿಗಳಲ್ಲಿ ನುಸುಳುವಿಕೆಯ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.
ಉಭಯ ರಾಷ್ಟ್ರಗಳ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುವ ಹಾಗೂ ಬಲಪಡಿಸುವಲ್ಲಿ ಭೂಬಂದರುಗಳು ಪ್ರಮುಖ ಪಾತ್ರವಹಿಸುತ್ತದೆ. ಪೆಟ್ರಾಪೋಲ್ ದಕ್ಷಿಣ ಏಷ್ಯಾದ ಅತಿ ದೊಡ್ಡ ಭೂ ಬಂದರು ಆಗಿದೆ. ಭಾರತ ಹಾಗೂ ಬಾಂಗ್ಲಾದೇಶ ನಡುವಿನ ವಾಣಿಜ್ಯ ಹಾಗೂ ವಹಿವಾಟಿನ ಪ್ರಮುಖ ಭೂಮಾರ್ಗವಾಗಿದೆ. ಪೆಟ್ರಾಪೋಲ್ (ಭಾರತ) ಹಾಗೂ ಬೆನಾಪೋಲ್(ಬಾಂಗ್ಲಾದೇಶ) ನಡುವೆ ಮುಖ್ಯವಾದ ಭೂಗಡಿಯಾಗಿದೆ ಎಂದರು.
ಇನ್ನು 'ಬಾಂಗ್ಲಾದೇಶದೊಂದಿಗೆ ಭೂಮಾರ್ಗವಾಗಿ ನಡೆಯುವ ಶೇಕಡ 70ರಷ್ಟು ವಹಿವಾಟು ಇದೇ ಮಾರ್ಗದಲ್ಲಿ ನಡೆಯುತ್ತದೆ. ಇದನ್ನು ಗೃಹ ಸಚಿವಾಲಯದಡಿಯಲ್ಲಿ ಭಾರತೀಯ ಭೂ ಬಂದರು ಪ್ರಾಧಿಕಾರವು ಆಡಳಿತಾತ್ಮಕ ನಿರ್ವಹಣೆ ಮಾಡುತ್ತದೆ. ಈ ಕೇಂದ್ರದ ಮೂಲಕ ಎರಡು ದೇಶಗಳ ನಡುವೆ 23.5 ಲಕ್ಷ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಹೊಸ ಟರ್ಮಿನಲ್ ನಿರ್ಮಾಣದಿಂದ ಎರಡು ದೇಶಗಳ ನಡುವಿನ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ.
ಪೆಟ್ರಾಪೋಲ್ ಲ್ಯಾಂಡ್ ಪೋರ್ಟ್‌ನಲ್ಲಿ ಟರ್ಮಿನಲ್ ಕಟ್ಟಡವನ್ನು ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 60,000 ಚದರ ಮೀಟರ್‌ಗಳನ್ನು ವ್ಯಾಪಿಸಿದೆ ಮತ್ತು ಪ್ರತಿದಿನ 25,000 ಪ್ರಯಾಣಿಕರನ್ನು ನಿಭಾಯಿಸಬಲ್ಲದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.