ತಿರುಪತಿ: ನಿತ್ಯ ನೂರಾರು ವಿಮಾನಗಳಿಗೆ ಬಾಂಬ್ ಬೆದರಿಕೆ ಬೆನ್ನಲ್ಲೇ ತಿರುಪತಿ ಪಟ್ಟಣದ ಸುಮಾರು ಅರ್ಧ ಡಜನ್ ಹೋಟೆಲ್‌ಗಳಿಗೆ ಕಳೆದ ಮೂರು ದಿನಗಳಿಂದ ಬಾಂಬ್ ಬೆದರಿಕೆ ಇಮೇಲ್ ಗಳು ಬಂದಿವೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಪೊಲೀಸರು ಬಾಂಬ್ ಬೆದರಿಕೆ ದೂರುಗಳನ್ನು ಸ್ವೀಕರಿಸಿದ ತಕ್ಷಣ, ನಿರ್ದಿಷ್ಟ ಹೋಟೆಲ್ ನಲ್ಲಿದ್ದ ಜನರನ್ನು ಸ್ಥಳಾಂತರಿಸಿ, ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ಶೋಧ ನಡೆಸಿದ್ದಾರೆ.
"ನಾವು ದೂರುಗಳನ್ನು ಸ್ವೀಕರಿಸಿದ ತಕ್ಷಣ ನಮ್ಮ ತಂಡಗಳು ಸಂಪೂರ್ಣ ತಪಾಸಣೆ ನಡೆಸಿವೆ. ನಾವು ತ್ವರಿತವಾಗಿ ಪ್ರತಿಕ್ರಿಯಿಸಿದ್ದೇವೆ. ಆದರೆ ಅವು (ನಕಲಿ ಇಮೇಲ್ ಬೆದರಿಕೆಗಳು) ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ. ನಾವು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ" ಎಂದು ತಿರುಪತಿ ಪೊಲೀಸ್ ವರಿಷ್ಠಾಧಿಕಾರಿ ಎಲ್ ಸುಬ್ಬರಾಯುಡು ತಿಳಿಸಿದ್ದಾರೆ.
ಲಖನೌನ 10 ಪ್ರತಿಷ್ಠಿತ ಹೋಟೆಲ್ ಗಳಿಗೂ ಬಾಂಬ್ ಬೆದರಿಕೆ
ಉತ್ತರ ಪ್ರದೇಶ ರಾಜಧಾನಿ ಲಖನೌನ ಕನಿಷ್ಠ 10 ಪ್ರತಿಷ್ಠಿತ ಹೋಟೆಲ್‌ಗಳಿಗೆ ಭಾನುವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ.
55 ಸಾವಿರ ಡಾಲರ್ ನೀಡದಿದ್ದರೆ ಸ್ಫೋಟ ಸಂಭವಿಸುತ್ತದೆ ಎಂದು ಇಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ.
"ನಿಮ್ಮ ಹೋಟೆಲ್‌ನ ಆವರಣದಲ್ಲಿ ಬಾಂಬ್‌ಗಳನ್ನು ಕಪ್ಪು ಚೀಲಗಳಲ್ಲಿ ಮರೆಮಾಡಲಾಗಿದೆ. ನನಗೆ 55,000 ಅಮೆರಿಕನ್ ಡಾಲರ್ ಬೇಕು. ಕೊಡದಿದ್ದರೆ ಬಾಂಬ್ ಸ್ಫೋಟಿಸುತ್ತೇನೆ ಮತ್ತು ಎಲ್ಲೆಡೆ ರಕ್ತ ಚೆಲ್ಲುತ್ತದೆ. ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲು ಯತ್ನಿಸಿದರೂ ಸ್ಫೋಟಿಸುತ್ತೇನೆ" ಎಂದು ಇಮೇಲ್ ನಲ್ಲಿ ಬರೆಯಲಾಗಿದೆ.
"ಬೆಳಗ್ಗೆ ನಮಗೆ ಬೆದರಿಕೆ ಮೇಲ್ ಬಂದಿತು. ಮುನ್ನೆಚ್ಚರಿಕೆಯಾಗಿ ನಾವು ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದೇವೆ ಮತ್ತು ತಂಡವು ಈ ವಿಷಯವನ್ನು ಪರಿಶೀಲಿಸುತ್ತಿದೆ" ಎಂದು ಹೋಟೆಲ್ ಒಂದರ ಮ್ಯಾನೇಜರ್ ಬ್ರಜೇಶ್ ಕುಮಾರ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಪೊಲೀಸರು ತಕ್ಷಣ ಬಾಂಬ್ ಬೆದರಿಕೆ ಸ್ವೀಕರಿಸಿದ ಎಲ್ಲಾ ಹೋಟೆಲ್ ಗಳಲ್ಲೂ ಶೋಧ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.