ಮುಂಬೈ: 60 ಲಕ್ಷ ರೂಪಾಯಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಸರಕು ಮತ್ತು ಸೇವಾ ತೆರಿಗೆ ಇಲಾಖೆ (CGST) ಅಧೀಕ್ಷಕ (ಸೋರಿಕೆ ತಡೆ ವಿಭಾಗ) ಸೇರಿದಂತೆ ಮೂವರು ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತರನ್ನು ಅಧೀಕ್ಷಕ ಸಚಿನ್ ಗೋಕುಲ್ಕಾ, ಚಾರ್ಟರ್ಡ್ ಅಕೌಂಟೆಂಟ್ ರಾಜ್ ಅಗರ್ವಾಲ್ ಮತ್ತು ಅಭಿಷೇಕ್ ಮೆಹ್ತಾ ಎಂದು ಗುರುತಿಸಲಾಗಿದೆ. ಆರೋಪಿಗಳು ರೂ. 60 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ರೂ. 20 ಲಕ್ಷ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
ಉದ್ಯಮಿಯೊಬ್ಬರು ನೀಡಿದ್ದ ದೂರಿನ ಅನ್ವಯ ಮುಂಬೈ CGSTಯ 6 ಅಧಿಕಾರಿಗಳು ಸೇರಿದಂತೆ 8 ಜನರ ವಿರುದ್ಧ ಲಂಚದ ಆರೋಪದ ಮೇಲೆ ಸಿಬಿಐ ಪ್ರಕರಣ ದಾಖಲಿದೆ.
ಸಾಂತಾಕ್ರೂಜ್ ನ CGST ಕಚೇರಿಗೆ ಸೆಪ್ಟೆಂಬರ್ 4 ರಂದು ಸಂಜೆ ಭೇಟಿ ನೀಡಿದಾಗ ಅವರನ್ನು ಇಡೀ ರಾತ್ರಿ ಕಚೇರಿಯಲ್ಲಿಯೇ ಕೂಡಿಹಾಕಲಾಗಿತ್ತು. ಸುಮಾರು 18 ಗಂಟೆಗಳ ನಂತರ ಸೆಪ್ಟೆಂಬರ್ 5 ರಂದು ಬಿಡುಗಡೆ ಮಾಡಲಾಗಿತ್ತು. ಕಚೇರಿಯಲ್ಲಿ ಕೂಡಿಹಾಕಿದ್ದ ವೇಳೆಯಲ್ಲಿ ಆರೋಪಿಗಳಲ್ಲಿ ಒಬ್ಬರಾದ CGST ಅಧೀಕ್ಷಕರು ದೂರುದಾರರನ್ನು ಬಂಧಿಸದೇ ಇರಲು ರೂ.80 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ನಂತರ ಅದನ್ನು ರೂ. 60 ಲಕ್ಷಕ್ಕೆ ಇಳಿಕೆ ಮಾಡಿದ್ದರು. ಅಧೀಕ್ಷಕರ ಇತರ ಮೂವರು ಸಹೋದ್ಯೋಗಿಗಳು ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ದೂರುದಾರರ ಮೇಲೆ ಒತ್ತಡ ಹೇರಿದ್ದರು ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಳಿಕ ದೂರುದಾರನಿಂದ ಆತನ ಸಂಬಂಧಿಕರೊಬ್ಬರಿಗೆ ಕರೆ ಮಾಡಿದ್ದು, 60 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಡಲಾಗಿದೆ. ಕೊನೆಗೆ 60 ಲಕ್ಷದ ಪೈಕಿ 30 ಲಕ್ಷವನ್ನು ಹವಾಲ ಹಣದ ಮೂಲಕ ಪಾವತಿಸಲಾಗಿದೆ. ತದನಂತರ ದೂರುದಾರರನ್ನು ಬಿಡುಗಡೆ ಮಾಡಲಾಗಿತ್ತು ಎಂದು ವಕ್ತಾರರು ಹೇಳಿದ್ದಾರೆ.
ಸಿಜಿಎಸ್‌ಟಿ ಅಧಿಕಾರಿಗಳ ಪರವಾಗಿ ರೂ. 20 ಲಕ್ಷ ಸ್ವೀಕರಿಸುವಾಗ ಚಾರ್ಟೆಡ್ ಅಕೌಂಟೆಂಟ್ ಅವರನ್ನು ಸಿಬಿಐ ಬಂಧಿಸಿದೆ. ತದನಂತರ ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ಮುಂಬೈನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ನ್ಯಾಯಾಲಯ ಆರೋಪಿಗಳನ್ನು ಇದೇ 10 ರವರೆಗೆ ಪೊಲೀಸ್ ವಶಕ್ಕೆ ನೀಡಿದೆ. ಮುಂಬೈ ಮತ್ತು ಸುತ್ತಮುತ್ತಲಿನ ಆರೋಪಿಗಳ ಕಚೇರಿ ಮತ್ತು ನಿವಾಸದ 09 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ವಿವಿಧ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ವಕ್ತಾರರು ಮಾಹಿತಿ ನೀಡಿದರು.