ಭೋಪಾಲ್: ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ಭಾನುವಾರ ರಾತ್ರಿ ಗಣೇಶ ಉತ್ಸವದ ಮೆರವಣಿಗೆ ವೇಳೆ ರಸ್ತೆಯಲ್ಲಿದ್ದ ಗುಂಡಿಯಿಂದಾಗಿ 22 ಅಡಿ ಎತ್ತರದ ಗಣೇಶನ ವಿಗ್ರಹ ಕುಸಿದು ಬಿದ್ದ ಘಟನೆ ನಡೆದಿದೆ.
ಘಟನೆಯಲ್ಲಿ ಮಹಿಳೆ ಸೇರಿದಂತೆ ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ನಂತರ ಡಿಸ್ಚಾರ್ಜ್ ಮಾಡಲಾಗಿದೆ ಎಂದು ವರದಿಯಾಗಿದೆ.
ಖಲ್ಲಾಸಿಪುರ ಪ್ರದೇಶದಲ್ಲಿ ಗಣೇಶ ಪ್ರತಿಷ್ಠಾಪನೆಗಾಗಿ ವಿಗ್ರಹವನ್ನು ಜಿವಾಜಿಗಂಜ್‌ನಿಂದ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ರಸ್ತೆಯಲ್ಲಿದ್ದ ಗುಂಡಿಯಿಂದಾಗಿ ಮೂರ್ತಿ ಕೆಳಗೆ ಬಿದ್ದಿದೆ ಎಂದು ಆರೋಪಿಸಲಾಗಿದೆ.
ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು, ರಸ್ತೆ ದುಸ್ಥಿತಿಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
“ಅನೇಕ ದಿನಗಳ ಪರಿಶ್ರಮದಿಂದ ಈ ದೈತ್ಯ ಗಣಪತಿಯ ವಿಗ್ರಹದ ತಯಾರಿಸಲಾಗಿದೆ. ಆದರೆ ಈಗ ಅದು ತುಂಡು ತುಂಡಾಗಿದೆ. ನಮ್ಮ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಲು ನಮಗೆ ಪದಗಳೇ ಇಲ್ಲ. ಸ್ಥಳೀಯ ಆಡಳಿತದ ನಿರ್ಲಕ್ಷದಿಂದ ಇದು ನಡೆದಿದೆ’ ಎಂದು ಗಣೇಶ ಪೂಜಾ ಕ್ಲಬ್‌ನ ಸದಸ್ಯ ರಿತಿಕ್ ಗೋಯಲ್ ಆರೋಪಿಸಿದ್ದಾರೆ.