ಗುವಾಹಟಿ: ಗುವಾಹಟಿಯ ಐಐಟಿಯ ವಿದ್ಯಾರ್ಥಿಯ ಶವ ಹಾಸ್ಟೆಲ್ ನಲ್ಲಿ ಪತ್ತೆಯಾಗಿದ್ದು, ಈ ವರ್ಷ ಪ್ರತಿಷ್ಠಿತ ಸಂಸ್ಥೆಯಲ್ಲಿ ವಿದ್ಯಾರ್ಥಿ ಸಾವನ್ನಪ್ಪಿರುವ ನಾಲ್ಕನೇ ಪ್ರಕರಣ ಇದಾಗಿದೆ.
ಸಹಪಾಠಿಯ ಸಾವಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಸಂಸ್ಥೆಯಲ್ಲಿ ಮಾನಸಿಕ ಆರೋಗ್ಯ ಹಾಗೂ ವಿದ್ಯಾರ್ಥಿಗಳ ಕ್ಷೇಮಕ್ಕೆ ಸಿಗುತ್ತಿರುವ ನೆರವಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಮೃತ ವಿದ್ಯಾರ್ಥಿ ಉತ್ತರ ಪ್ರದೇಶದ ಮೂಲದವರಾಗಿದ್ದು, ವಿದ್ಯಾರ್ಥಿಯ ಮೃತದೇಹವನ್ನು ಗುವಾಹಟಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ (ಜಿಎಂಸಿಹೆಚ್) ಗೆ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.
"ನಮ್ಮ ಸಮುದಾಯದ ವಿದ್ಯಾರ್ಥಿಯ ಸಾವನ್ನು ವರದಿ ಮಾಡಲು IITG ತೀವ್ರ ದುಃಖಿತವಾಗಿದೆ. ಈ ಕಷ್ಟದ ಸಮಯದಲ್ಲಿ ವಿದ್ಯಾರ್ಥಿಯ ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ನಾವು ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ" ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
"ನಮ್ಮ ವಿದ್ಯಾರ್ಥಿ ಸಮುದಾಯವನ್ನು ನಮ್ಮ ಬೆಂಬಲ ನೆಟ್‌ವರ್ಕ್‌ಗಳನ್ನು ತಲುಪಲು ನಾವು ಪ್ರೋತ್ಸಾಹಿಸುತ್ತೇವೆ. IITG ಎಲ್ಲಾ ವಿದ್ಯಾರ್ಥಿಗಳಿಗೆ ಬೆಂಬಲ ಮತ್ತು ಸುರಕ್ಷಿತ ವಾತಾವರಣವನ್ನು ಬೆಳೆಸುವುದಕ್ಕೆ ಸಂಸ್ಥೆ ಬದ್ಧವಾಗಿದೆ" ಎಂದು ವಕ್ತಾರರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಗಸ್ಟ್ 9 ರಂದು 24 ವರ್ಷದ ಎಂಟೆಕ್ ವಿದ್ಯಾರ್ಥಿನಿ ಕೂಡ ತನ್ನ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.