ನವದೆಹಲಿ: ಕೋಲ್ಕತ್ತಾದ ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ತರಬೇತಿ ನಿರತ ವೈದ್ಯೆಯ ಅಮಾನುಷ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇಂದು ಸೋಮವಾರ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಲಿದೆ.
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ (CJI) ಡಿ ವೈ ಚಂದ್ರಚೂಡ್ ಅವರ ನೇತೃತ್ವದ ತ್ರಿಸದಸ್ಯರನ್ನೊಳಗೊಂಡ ಉನ್ನತ ಪೀಠ ಈ ವಿಚಾರಣೆಯನ್ನು ಇಂದು ಕೈಗೆತ್ತಿಕೊಳ್ಳಲಿದೆ.
ಕಳೆದ ಆಗಸ್ಟ್ 20 ರಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ, ಶಸ್ತ್ರಚಿಕಿತ್ಸಕ ವೈಸ್ ಅಡ್ಮಿರಲ್ ಮತ್ತು ವೈದ್ಯಕೀಯ ಸೇವೆಗಳ (ನೌಕಾಪಡೆಯ ಡಿಜಿ) ಆರ್ತಿ ಸರಿನ್ ನೇತೃತ್ವದಲ್ಲಿ 10 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ (NTF) ನ್ನು ವೈದ್ಯರು ಮತ್ತು ಆರೋಗ್ಯ ರಕ್ಷಣೆಗೆ ಸುರಕ್ಷತೆ, ಭದ್ರತೆ ಮತ್ತು ಸೌಲಭ್ಯಗಳನ್ನು ಖಾತ್ರಿಪಡಿಸುವ ಮಾರ್ಗಸೂಚಿಗಳನ್ನು ರೂಪಿಸಲು ರಚಿಸಿತ್ತು.
ಸುಪ್ರೀಂ ಕೋರ್ಟ್ ಸ್ಥಾಪಿಸಿದ ಎನ್‌ಟಿಎಫ್‌ನ ಇತರ ಸದಸ್ಯರಲ್ಲಿ ಹೈದರಾಬಾದ್ ಮೂಲದ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಯ ಅಧ್ಯಕ್ಷ ಡಿ ನಾಗೇಶ್ವರ ರೆಡ್ಡಿ, ದೆಹಲಿಯ ಏಮ್ಸ್ ನಿರ್ದೇಶಕ ಎಂ ಶ್ರೀನಿವಾಸ್, ನಿಮ್ಹಾನ್ಸ್ ಬೆಂಗಳೂರು ನಿರ್ದೇಶಕಿ- ಪ್ರತಿಮಾ ಮೂರ್ತಿ, ಜೋಧ್‌ಪುರ ಏಮ್ಸ್ ಕಾರ್ಯನಿರ್ವಾಹಕ ನಿರ್ದೇಶಕ- ಗೋವರ್ಧನ್ ದತ್ ಪುರಿ, ಗಂಗಾರಾಮ್ ಆಸ್ಪತ್ರೆಯ ಸೌಮಿತ್ರಾ ರಾವತ್, ರೋಹ್ಟಕ್ ಮೂಲದ ಪಂಡಿತ್ ಬಿ ಡಿ ಶರ್ಮಾ ವೈದ್ಯಕೀಯ ವಿಶ್ವವಿದ್ಯಾಲಯದ ಉಪಕುಲಪತಿ ಅನಿತಾ ಸಕ್ಸೇನಾ, ಮುಂಬೈ ಮೂಲದ ಗ್ರಾಂಟ್ ಮೆಡಿಕಲ್ ಕಾಲೇಜಿನ ಡೀನ್ ಪಲ್ಲವಿ ಸಾಪ್ಲೆ ಮತ್ತು ಪಾರಸ್ ಹೆಲ್ತ್ ಗುರುಗ್ರಾಮ್‌ನಲ್ಲಿ ನರವಿಜ್ಞಾನದ ಅಧ್ಯಕ್ಷೆ ಪದ್ಮಾ ಶ್ರೀವಾಸ್ತವ ಅವರಿದ್ದಾರೆ.
ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠವು, ಈ ಘಟನೆ ಭಯಾನಕವಾಗಿದ್ದು, ರಾಜ್ಯದ ಆಡಳಿತ ಯಂತ್ರದ ವ್ಯವಸ್ಥಿತ ವೈಫಲ್ಯವನ್ನು ತೋರಿಸುತ್ತದೆ ಎಂದು ಹೇಳಿದೆ. ಇಂದಿನ ವಿಚಾರಣೆಯಲ್ಲಿ ಏನು ತೀರ್ಪು ನೀಡಲಿದೆ ಎಂಬುದು ಕುತೂಹಲವಾಗಿದೆ.