ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಮೂರು ಅಂತಸ್ತಿನ ಮನೆಯೊಂದು ಕುಸಿದು ಬಿದ್ದ ಪರಿಣಾಮ ಮೃತಪಟ್ಟವರ ಸಂಖ್ಯೆ ಒಂಬತ್ತಕ್ಕೆ ಏರಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದೆ ಎಂದು ಜಿಲ್ಲಾಡಳಿತ ಭಾನುವಾರ ತಿಳಿಸಿದೆ.
ಅವಶೇಷಗಳಡಿ ಸಿಲುಕಿದ್ದ ಆರು ವರ್ಷದ ಬಾಲಕ ಸೋಫಿಯಾನ್ ನನ್ನು ರಕ್ಷಿಸಲಾಗಿದ್ದು, ಆತನ ಆರೋಗ್ಯ ಸ್ಥಿರವಾಗಿದೆ. ಒಬ್ಬ ವ್ಯಕ್ತಿ ಇನ್ನೂ ಅವಶೇಷಗಳಡಿ ಸಿಲುಕಿರುವ ಆತಂಕವಿರುವುದಾಗಿ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಘಟನೆಯಲ್ಲಿ ಗಾಯಗೊಂಡಿದ್ದ ನಾಲ್ವರು ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಸಂಜೆ ಮೀರತ್ ನ ಜಾಕಿರ್ ಕಾಲೋನಿಯಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ 12 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು. ಇವರಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ.