ಲಖನೌ: ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ಅಪಘಾತ ಮಾಡಿಸುವ ವಿಫಲ ಯತ್ನವೊಂದು ಬೆಳಕಿಗೆ ಬಂದಿದೆ. ಕಾನ್ಪುರದಲ್ಲಿ ರೈಲು ಹಳಿಯ ಮೇಲೆ ಖಾಲಿ ಸಿಲಿಂಡರ್ ಇರಿಸಿದ್ದು ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ.
ಹಳಿಯ ಮೇಲೆ ಸಿಲಿಂಡರ್ ಕಂಡ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದ್ದು ರೈಲು ನಿಂತಿದೆ. ಈ ತಿಂಗಳಲ್ಲಿ ವರದಿಯಾಗುತ್ತಿರುವ 2 ನೇ ರೈಲು ವಿಧ್ವಂಸಕ ಕೃತ್ಯ ಇದಾಗಿದೆ.
ಕಾನ್ಪುರದಿಂದ ಅಲಹಾಬಾದ್‌ಗೆ ರೈಲು ಪ್ರಯಾಣಿಸುತ್ತಿದ್ದಾಗ ಬೆಳಗ್ಗೆ 8:10ಕ್ಕೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೈಲ್ವೆ ಪೊಲೀಸರು ಸಿಲಿಂಡರ್ ನ್ನು ಹಳಿಯಿಂದ ಹೊರತೆಗೆದು ತನಿಖೆ ನಡೆಸುತ್ತಿದ್ದಾರೆ. "ಸಿಲಿಂಡರ್ ಐದು ಲೀಟರ್ ಸಾಮರ್ಥ್ಯ ಹೊಂದಿದ್ದು ಖಾಲಿಯಾಗಿತ್ತು. ಅದನ್ನು ತೆಗೆದುಹಾಕಲಾಗಿದೆ ಮತ್ತು ತನಿಖೆ ನಡೆಯುತ್ತಿದೆ" ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
"ಕಾನ್ಪುರದಿಂದ ಪ್ರಯಾಗರಾಜ್‌ಗೆ ಪ್ರಯಾಣಿಸುತ್ತಿದ್ದ ಗೂಡ್ಸ್ ರೈಲು ಬೆಳಗ್ಗೆ 5:50 ಕ್ಕೆ ನಿಂತಿತು, ಚಾಲಕ ಗ್ಯಾಸ್ ಸಿಲಿಂಡರ್ ನ್ನು ಟ್ರ್ಯಾಕ್‌ನಲ್ಲಿ ಗುರುತಿಸಿದ ನಂತರ ರೈಲ್ವೇ ಐಒಡಬ್ಲ್ಯೂ, ಭದ್ರತೆ ಮತ್ತು ಇತರ ತಂಡಗಳು ಪರಿಶೀಲಿಸಿದವು. ಸಿಲಿಂಡರ್ ಮತ್ತು ಅದನ್ನು ತೆಗೆದುಹಾಕಲು ಹೆಚ್ಚಿನ ತನಿಖೆಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಉತ್ತರ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಹೇಳಿದರು.
ಸೆಪ್ಟೆಂಬರ್ 8ರಂದು ಹಳಿಗಳ ಮೇಲೆ ಎಲ್ ಪಿಜಿ ಸಿಲಿಂಡರ್ ಇಟ್ಟು ಕಾಳಿಂದಿ ಎಕ್ಸ್ ಪ್ರೆಸ್ ಹಳಿತಪ್ಪಿಸಲು ಯತ್ನಿಸಲಾಗಿತ್ತು. ರೈಲು ಹಳಿಯಿಂದ ಸಿಲಿಂಡರ್ ಎಸೆದು ನಿಲ್ಲುವ ಮುನ್ನವೇ ಸಿಲಿಂಡರ್ ಗೆ ಡಿಕ್ಕಿ ಹೊಡೆದಿದೆ.