ನವದೆಹಲಿ: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ದಂಪತಿಗಳು ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟ ತಮ್ಮ ಇಬ್ಬರು ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಯಿಂದ 15 ಕಿಲೋಮೀಟರ್ ನಡೆದ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ) ಮಹಾರಾಷ್ಟ್ರ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತ ರಾಧಾಕಾಂತ ತ್ರಿಪಾಠಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಎನ್‌ಎಚ್‌ಆರ್‌ಸಿ ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಸೆಪ್ಟೆಂಬರ್ 04, 2024 ರಂದು, ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ತೀವ್ರ ಜ್ವರದಿಂದ ಮೃತಪಟ್ಟಿದ್ದ ತಮ್ಮ ಇಬ್ಬರು ಪುತ್ರರ ಮೃತದೇಹಗಳನ್ನು ಹೆಗಲ ಮೇಲೆ ಹೊತ್ತೊಯ್ದಿರುವ ವಿಡಿಯೋ ವೈರಲ್ ಆಗಿತ್ತು.
ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕರು ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಸಾವನ್ನಪ್ಪಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ್ದರಿಂದ ಆಸ್ಪತ್ರೆಯಿಂದ 15 ಕಿಮೀ ದೂರದಲ್ಲಿರುವ ಗಡ್ಚಿರೋಲಿಯಲ್ಲಿರುವ ತಮ್ಮ ಗ್ರಾಮದ ಮನೆಗೆ ಕಾಲ್ನಡಿಗೆಯಲ್ಲೆ ದಂಪತಿ ಸಾಗಿದ್ದರು.