ನವದೆಹಲಿ: ಮೊನ್ನೆ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ಇಂದು ಸೋಮವಾರ ದೆಹಲಿಯ ಎಂಟನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಕೊಂಡರು.
ದೆಹಲಿ ವಿಧಾನಸಭೆಯ ಅಧಿವೇಶನ ಇದೇ ಸೆಪ್ಟೆಂಬರ್ 26 ಮತ್ತು 27 ರಂದು ನಡೆಯಲಿದೆ. ಅತಿಶಿ ಅವರು ಸರ್ಕಾರದಲ್ಲಿ ಶಿಕ್ಷಣ, ಆದಾಯ, ಹಣಕಾಸು, ವಿದ್ಯುತ್ ಮತ್ತು ಲೋಕೋಪಯೋಗಿ ಇಲಾಖೆ ಸೇರಿದಂತೆ 13 ಖಾತೆಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದಾರೆ.
ಭಗವಾನ್ ರಾಮನ ಖಾದೌನ್ ನ್ನು ಸಿಂಹಾಸನದ ಮೇಲೆ ಕೂರಿಸಿ ಭಾರತ ಆಳಿದಂತೆ ದೆಹಲಿಯ ಮುಖ್ಯಮಂತ್ರಿಯಾಗಿ ನಾನು ಮುಂದಿನ ನಾಲ್ಕು ತಿಂಗಳು ಕೆಲಸ ಮಾಡುತ್ತೇನೆ. ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಯುವ ಮೂಲಕ ರಾಜಕೀಯದಲ್ಲಿ ಘನತೆ ಉಳಿಸಿಕೊಂಡಿದ್ದಾರೆ. ಅವರ ವ್ಯಕ್ತಿತ್ವವನ್ನು ಹಾಳುಮಾಡಲು ಬಿಜೆಪಿಯವರಿಗೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರ ವಹಿಸಿಕೊಂಡ ಕೂಡಲೇ ಹೇಳಿದರು.
ಪಕ್ಕದಲ್ಲಿ ಕುರ್ಚಿ ಹಾಕಿ ಕುಳಿತ ಆತಿಶಿ: ಇಲ್ಲಿ ಇಂದು ಕಂಡ ವಿಶೇಷತೆಯೆಂದರೆ ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ ಕುಳಿತುಕೊಂಡಿದ್ದ ಕುರ್ಚಿಯಲ್ಲಿ ಕೂರದೆ ಆತಿಶಿ ಅವರು ಪಕ್ಕದಲ್ಲಿ ಕುರ್ಚಿ ಹಾಕಿ ಕುಳಿತರು. ಕೇಜ್ರಿವಾಲ್ ಅವರು ಕುಳಿತುಕೊಂಡಿದ್ದ ಕುರ್ಚಿ ಹಾಗೆಯೇ ಖಾಲಿ ಇದೆ.
ಖಾತೆಗಳ ಹಂಚಿಕೆ: ಸೌರಭ್ ಭಾರದ್ವಾಜ್ ಅವರ ಅಡಿಯಲ್ಲಿ ಎಂಟು ಇಲಾಖೆಗಳನ್ನು ಹೊಂದಿದ್ದಾರೆ, ಆರೋಗ್ಯ, ಪ್ರವಾಸೋದ್ಯಮ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ಅತಿಶಿ ನಂತರ ಅತಿ ಹೆಚ್ಚು ಖಾತೆಗಳನ್ನು ಹೊಂದಿದ್ದಾರೆ.
ಹೊಸದಾಗಿ ಸೇರ್ಪಡೆಗೊಂಡ ಮುಖೇಶ್ ಅಹ್ಲಾವತ್ ಅವರು ಕಾರ್ಮಿಕ, ಎಸ್‌ಸಿ ಮತ್ತು ಎಸ್‌ಟಿ, ಉದ್ಯೋಗ ಮತ್ತು ಭೂ ಮತ್ತು ಕಟ್ಟಡ ಇಲಾಖೆಗಳ ಖಾತೆಯನ್ನು ಪಡೆದುಕೊಂಡಿದ್ದಾರೆ.
ಗೋಪಾಲ್ ರೈ ಅವರಿಗೆ ಅಭಿವೃದ್ಧಿ, ಸಾಮಾನ್ಯ ಆಡಳಿತ ಇಲಾಖೆ, ಪರಿಸರ ಮತ್ತು ಅರಣ್ಯ ಖಾತೆಗಳನ್ನು ನೀಡಲಾಗಿದೆ.
ಕೈಲಾಶ್ ಗಹ್ಲೋಟ್ ಅವರು ತಮ್ಮ ಹಿಂದಿನ ಖಾತೆಗಳಾದ ಸಾರಿಗೆ, ಗೃಹ, ಆಡಳಿತ ಸುಧಾರಣೆಗಳು, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಉಳಿಸಿಕೊಂಡಿದ್ದಾರೆ.
ಅತಿಶಿ ನೇತೃತ್ವದ ಹೊಸ ಸಚಿವ ಸಂಪುಟವು ಮುಂದಿನ ವರ್ಷ ಫೆಬ್ರವರಿಯಲ್ಲಿ ದೆಹಲಿ ಚುನಾವಣೆ ಎದುರಿಸುವ ಮುನ್ನ ಪ್ರಾರಂಭಿಸಲು ಬಾಕಿ ಉಳಿದಿರುವ ಯೋಜನೆಗಳು ಮತ್ತು ಹೊಸ ಉಪಕ್ರಮಗಳ ದೀರ್ಘ ಪಟ್ಟಿಯನ್ನು ಹೊಂದಿದೆ.