ಚಂಡೀಗಢ: ದೇಶದಲ್ಲಿನ ನಿರುದ್ಯೋಗ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ದೇಶದ ಉದ್ಯೋಗ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕಿತ್ತುಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಕ್ಟೋಬರ್ 5ರಂದು ನಡೆಯಲಿರುವ ಹರಿಯಾಣ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕರ್ನಾಲ್‌ನ ಅಸ್ಸಂದ್‌ನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ಭಾರೀ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಾತಿ ಗಣತಿ ವಿಷಯವನ್ನು ಪ್ರಸ್ತಾಪಿಸಿದ ಅವರು, ಬಿಜೆಪಿ ಜನರನ್ನು ಒಡೆದು ಪರಸ್ಪರರ ವಿರುದ್ಧ ಎತ್ತಿಕಟ್ಟುತ್ತಿದೆ. ಅಲ್ಲದೆ ಬಿಜೆಪಿಗರು ಹರಿಯಾಣವನ್ನು 'ಹಾಳು ಮಾಡಿದ್ದಾರೆ' ಎಂದು ಆರೋಪಿಸಿದರು. ನಾನು ಅಮೆರಿಕಕ್ಕೆ ಭೇಟಿ ನೀಡಿದ್ದೆ ಅಲ್ಲಿ ಹರ್ಯಾಣದ ಕೆಲವು ವಲಸಿಗರನ್ನು ಭೇಟಿಯಾದೆ, ಅವರು ತಮ್ಮ ರಾಜ್ಯದಲ್ಲಿ ಉದ್ಯೋಗಾವಕಾಶ ಸಿಗದ ಕಾರಣ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅಲ್ಲಿಗೆ ಹೋಗಿದ್ದಾರೆ. ಹರಿಯಾಣದ 15 ರಿಂದ 20 ಯುವಕರು ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಸಣ್ಣ ಸಣ್ಣ ಕೋಣೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಗಾಂಧಿ ಹೇಳಿದರು.
ಅಮೆರಿಕಕ್ಕೆ ಹೇಗೆ ತಲುಪಿದೀರಿ ಎಂದು ಪ್ರಶ್ನಿಸಿದೆ ಅದಕ್ಕೆ ಅವರು, ಕಝಾಕಿಸ್ತಾನ್ ಮತ್ತು ಟರ್ಕಿಯಂತಹ ದೇಶಗಳ ಜೊತೆಗೆ ದಕ್ಷಿಣ ಅಮೆರಿಕಾದ ದೇಶಗಳು ಮತ್ತು ಪನಾಮದ ಕಾಡುಗಳ ದುರ್ಗಮ ಹಾದಿಗಳಲ್ಲಿ ಪ್ರಯಾಣಿಸಿ ಅಮೆರಿಕಕ್ಕೆ ಬಂದು ತಲುಪಿದ್ದಾಗಿ ಹೇಳಿದರು. ಈ ಸಂದರ್ಭಗಳಲ್ಲಿ ನಮ್ಮನ್ನು ದರೋಡೆಕೋರರು ದೋಚಿದರು. ನಮ್ಮ ಹಲವು ಸಹೋದರರನ್ನು ಹತ್ಯೆ ಮಾಡಿದ್ದನ್ನು ನಾವು ಕಣ್ಣಾರೆ ನೋಡಿದ್ದೇವೆ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡರು ಎಂದು ರಾಹುಲ್ ಗಾಂಧಿ ಹೇಳಿದರು.
ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಅಮೆರಿಕವನ್ನು ತಲುಪಲು ಕನಿಷ್ಠ 35 ಲಕ್ಷ ರೂ.ಗಳ ಅಗತ್ಯವಿದೆ ಎಂದು ಯುವಕನೊಬ್ಬ ಹೇಳಿದ್ದು, ಹೆಚ್ಚಿನ ಬಡ್ಡಿದರದಲ್ಲಿ ಸಾಲ ಮಾಡಿ ಅಥವಾ ತನ್ನ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದಾಗಿ ಹೇಳಿದರು. ಇದೇ ಹಣವನ್ನು ಅಮೆರಿಕಕ್ಕೆ ಬರಲು ಖರ್ಚು ಮಾಡುವ ಬದಲು ಹರಿಯಾಣದಲ್ಲಿ ಏನಾದರೂ ವ್ಯಾಪಾರ ಮಾಡಬಹುದಿತ್ತು ಎಂದು ಕೇಳಿದಾಗ, ಆ ಹಣದಿಂದ ಉದ್ಯಮ ಆರಂಭಿಸುವುದು ಪ್ರಾಯೋಗಿಕವಲ್ಲ ಎಂದು ಹೇಳಿದರು ಎಂದು ರಾಹುಲ್ ಗಾಂಧಿ ಹೇಳಿದರು.
50 ಲಕ್ಷದಿಂದ ಹರಿಯಾಣದಲ್ಲಿ ಯಾವುದೇ ವ್ಯವಹಾರವನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಟೆಕ್ಸಾಸ್‌ನ ಯುವಕರು ಹರ್ಯಾಣದಲ್ಲಿ ಉದ್ಯಮವನ್ನು ಪ್ರಾರಂಭಿಸಲು ಇಷ್ಟು ಹಣವನ್ನು ಖರ್ಚು ಮಾಡಿದ್ದರೆ ಅದು ವಿಫಲವಾಗುತ್ತಿತ್ತು ಎಂದು ಹೇಳಿದರು ಎಂದು ರಾಹುಲ್ ಹೇಳಿದರು.