ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಪಕ್ಷ ಡಿಎಂಕೆಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಎ ರಾಜಾ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದು, 'ಹಿಂದೂ ಧಾರ್ಮದ ಸಂಕೇತ ಚಿಹ್ನೆಗಳ ಧರಿಸಬೇಡಿ, ಸಂಘಿಗಳಿಗಿಂತ ಭಿನ್ನವಾಗಿರಿ ಎಂದು ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.
ಹೌದು.. ನೀಲಗಿರಿ ಲೋಕಸಭಾ ಕ್ಷೇತ್ರದ ಸಂಸದ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪ್ರಧಾನ ಕಾರ್ಯದರ್ಶಿಯಾಗಿರುವ ರಾಜಾ, ಪಕ್ಷದ "ಧೋತಿ" ಧರಿಸುವಾಗ ಎಲ್ಲಾ ಧಾರ್ಮಿಕ ಚಿಹ್ನೆಗಳನ್ನು ತೆಗೆದುಹಾಕುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
ಪಕ್ಷದ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಎ ರಾಜಾ ಮತ್ತೆ ತಮ್ಮ ಸನಾತನ ವಿರೋಧಿ ಮಾತುಗಳನ್ನಾಡಿದರು. ಪಕ್ಷದ ಕಾರ್ಯಕರ್ತರು ಸಂಘಿಗಳಂತೆ ವೇಷಭೂಷಣ ಧರಿಸಬಾರದು. ಹಿಂದೂ ಧರ್ಮದ ಸಂಕೇತ ಚಿಹ್ನೆಗಳ ಧರಿಸಬಾರದು. ತಿಲಕ, ಕೇಸರಿ ಧೋತಿಗಳನ್ನು ತ್ಯಜಿಸಿ ಸಂಘಿಗಳಿಗಿಂತ ಭಿನ್ನವಾಗಿರಿ ಎಂದು ಸಲಹೆ ನೀಡಿದರು.
ಸಂಘಿಗಳು ಯಾರು.. ಕಾರ್ಯಕರ್ತರು ಯಾರು ನಮಗೆ ತಿಳಿಯುತ್ತಿಲ್ಲ
ಇದೇ ವೇಳೆ ನಮ್ಮ ಪಕ್ಷದ ನಾಯಕರು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರು ಈ ಹಿಂದೂ ಧಾರ್ಮಿಕ ಸಂಕೇತಗಳಾದ ಬಿಂದಿ / ತಿಲಕ / ಧಾರ್ಮಿಕ ಗುರುತುಗಳನ್ನು ಹೊಂದದಿರಿ. ನೀವಿಬ್ಬರೂ ಚಪ್ಪಾಳೆ ತಟ್ಟಿದಾಗ, ಯಾರು ಯಾರೆಂದು ನಮಗೆ ತಿಳಿದಿರುವುದಿಲ್ಲ.
ಅದಕ್ಕಾಗಿಯೇ ನಾನು ಹೇಳುತ್ತಿದ್ದೇನೆ, ದೇವರನ್ನು ಪ್ರಾರ್ಥಿಸಿ. ನಿಮ್ಮ ಪೋಷಕರು ನಿಮ್ಮ ಹಣೆಯ ಮೇಲೆ ಪವಿತ್ರ ಭಸ್ಮವನ್ನು ಇಟ್ಟುಕೊಂಡರೆ, ಅದನ್ನು ಇಟ್ಟುಕೊಳ್ಳಿ. ಆದರೆ ನೀವು ಡಿಎಂಕೆ ಧೋತಿ ಧರಿಸಿದ ನಂತರ, ಅಥವಾ ಪಕ್ಷದ ಕಾರ್ಯಕ್ರಮಕ್ಕೆ ಬಂದಾಗ ಅದನ್ನು ತೆಗೆದುಹಾಕಿ ಎಂದು ಎ ರಾಜಾ ಹೇಳಿದ್ದಾರೆ.
ಅಂತೆಯೇ ನಾವು ನೀವು ದೇವರನ್ನು ಪ್ರಾರ್ಥಿಸಬೇಡಿ ಎಂದು ಹೇಳುತ್ತಿಲ್ಲ.. ನೀವು ನಂಬಿಕೆ ಇರಿಸಿರುವ ನಿಮಗೆ ಬೇಕಾದ ದೇವರನ್ನು ಪ್ರಾರ್ಥಿಸಿ. ಜನರ ನಡುವೆ ದಯೆ ತೋರಿಸುವ ದೇವರನ್ನು; ಅಣ್ಣಾ ಹೇಳಿದಂತೆ ಮುಗ್ಧ ಹೃದಯದಲ್ಲಿ ವಾಸಿಸುವ ಮತ್ತು ಬಡವರ ನಗುವಿನಲ್ಲಿ ಕಾಣುವ ದೇವರನ್ನು ನಾವು ವಿರೋಧಿಸುವುದಿಲ್ಲ ಎಂದೂ ಹೇಳಿದ್ದಾರೆ.
ಧರ್ಮದ ಕುರಿತು ಹೇಳಿಕೆ ಇದೇ ಮೊದಲೇನಲ್ಲ..
ಇನ್ನು ಎ ರಾಜಾ ಧರ್ಮದ ಕುರಿತು ವಿವಾದಿತ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲೇನಲ್ಲ.. ಈ ಹಿಂದೆ, ಡಿಎಂಕೆ ನಾಯಕರು ಹಿಂದೂ ಧರ್ಮವನ್ನು ಅಪಾಯ ಎಂದು ಕರೆದಿದ್ದರು. "ಹಿಂದೂ ಧರ್ಮವು ಭಾರತಕ್ಕೆ ಮಾತ್ರವಲ್ಲ, ಜಗತ್ತಿಗೂ ಅಪಾಯವಾಗಿದೆ" ಎಂದು ಅವರು ಹೇಳಿದ್ದರು.