ಲಖನೌ: ಜನಸಾಮಾನ್ಯರು ಹಣ ಕಳೆದುಕೊಳ್ಳುತ್ತಿದ್ದು, ಆರ್ಥಿಕತೆಗೂ ಮುಳುವಾಗುವ ಸಾಧ್ಯತೆಯಿರುವುದರಿಂದ ಭಾರತದ ಷೇರು ಮಾರುಕಟ್ಟೆ ಕುಸಿತದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಶನಿವಾರ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಅಖಿಲೇಶ್ ಯಾದವ್, ಆರ್ಥಿಕತೆಯ ಈ ಡಬಲ್ ವಿಷ ವರ್ತುಲಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ. 27 ರಷ್ಟು ಸೇರಿದಂತೆ ಪರಸ್ಪರ ಸುಂಕ ಘೋಷಿಸಿದ ನಂತರ ಶುಕ್ರವಾರ ಭಾರತೀಯ ಷೇರು ಮಾರುಕಟ್ಟೆ ಕುಸಿದಿತ್ತು.
ಹೂಡಿಕೆ ಮಾಡಲು ಮತ್ತು ಸರಕು, ವಾಹನ, ಭೂಮಿ ಖರೀದಿಗಾಗಿ ಜನರು ಇಟ್ಟಿದ್ದ ಹಣವನ್ನು ಕಳೆದುಕೊಳ್ಳುತ್ತಿರುವುದರಿಂದ ದೇಶದ ಷೇರುಪೇಟೆಯಲ್ಲಿ ಲಕ್ಷಾಂತರ ಕೋಟಿ ರೂ. ನಷ್ಟವಾಗುತ್ತಿರುವ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯವಾಗಿದೆ. ಇವು ಮಾರುಕಟ್ಟೆಯಲ್ಲಿ ಖರೀದಿ ಮತ್ತು ಮಾರಾಟದ ಚಕ್ರಗಳಾಗಿದ್ದು, ಆರ್ಥಿಕತೆಯೂ ಆಗಿರುತ್ತವೆ. ಷೇರು ಮಾರುಕಟ್ಟೆಯಲ್ಲಿ ಜನ ಹಣವನ್ನು ಕಳೆದುಕೊಂಡರೆ ಮಾರುಕಟ್ಟೆ ಮತ್ತು ಆರ್ಥಿಕತೆ ಎರಡೂ ಹಾಳಾಗುತ್ತವೆ ಎಂದು ಯಾದವ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಬಿಎಸ್ ಇ ಸೆನ್ಸೆಕ್ಸ್ ಸುಮಾರು 900 ಪಾಯಿಂಟ್ ಗಳಷ್ಟು ಕುಸಿದು 76,000 ಮಟ್ಟಕ್ಕಿಂತ ಕೆಳಗೆ ತಲುಪಿದ್ದರಿಂದ ಹೂಡಿಕೆದಾರರ ರೂ. 10 ಲಕ್ಷ ಕೋಟಿ ಸಂಪತ್ತು ಕರಗಿದೆ.
ತಮ್ಮ ಉಳಿತಾಯವನ್ನು ಷೇರು ಮಾರುಕಟ್ಟೆಯಲ್ಲಿ ಹಾಕುವ ಯುವ ಜನತೆ ಮಾರುಕಟ್ಟೆಯ ಈ ಅನಿಶ್ಚಿತತೆಗೆ ಬಲಿಯಾಗುತ್ತಿದ್ದಾರೆ. ಇದು ಷೇರು ಮಾರುಕಟ್ಟೆಯ ಭವಿಷ್ಯಕ್ಕೆ ಸಕಾರಾತ್ಮಕ ಸಂಕೇತವಾಗುವುದಿಲ್ಲ, ಈ ಆರ್ಥಿಕತಯ ವಿಷ ವರ್ತುಲಕ್ಕೆ ಬಿಜೆಪಿ ಸರ್ಕಾರ ನೇರ ಹೊಣೆ ಮಾತ್ರವಲ್ಲದೇ, ಅದು ಕೂಡಾ ತಪಿತಸ್ಥ ಈಗ ಹೂಡಿಕೆದಾರರು ಬಿಜೆಪಿ ಬೇಡ ಎನ್ನುತ್ತಿದ್ದಾರೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.