ಚಂಡೀಗಢ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನುಬದ್ಧ ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ವರ್ಷ ನವೆಂಬರ್ 26 ರಂದು ಆರಂಭಿಸಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ ಭಾನುವಾರ ಅಂತ್ಯಗೊಳಿಸಿದ್ದಾರೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಮನವಿ ಮಾಡಿದ ಒಂದು ದಿನದ ನಂತರ ದಲ್ಲೇವಾಲ್ ಈ ಘೋಷಣೆ ಮಾಡಿದ್ದಾರೆ. ಪಂಜಾಬ್‌ನ ಫತೇಘರ್ ಸಾಹಿಬ್ ಜಿಲ್ಲೆಯ ಸಿರ್ಹಿಂದ್‌ನಲ್ಲಿ ಆಯೋಜಿಸಲಾದ 'ಕಿಸಾನ್ ಮಹಾಪಂಚಾಯತ್' ನಲ್ಲಿ ತನ್ನ ಅನಿರ್ದಿಷ್ಟ ಉಪವಾಸವನ್ನು ಅಂತ್ಯಗೊಳಿಸುವುದಾಗಿ ದಲ್ಲೆವಾಲ್ ಘೋಷಿಸಿದರು.
"ಎಲ್ಲಾ ರೈತರು ಆಮರಣಾಂತ ಉಪವಾಸವನ್ನು ಕೊನೆಗೊಳಿಸುವಂತೆ ನನ್ನನ್ನು ಕೇಳಿದ್ದೀರಿ. ನಾನು ನಿಮ್ಮ ಭಾವನೆಗಳನ್ನು ಗೌರವಿಸುತ್ತೇನೆ. ನಿಮ್ಮ ಆದೇಶವನ್ನು ನಾನು ಸ್ವೀಕರಿಸುತ್ತೇನೆ" ಎಂದು ದಲ್ಲೆವಾಲ್ ಸಭೆಯಲ್ಲಿ ಹೇಳಿದರು.
ದಲ್ಲೆವಾಲ್ ಅವರು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಜಂಟಿ ವೇದಿಕೆಯ ಹಿರಿಯ ನಾಯಕರಾಗಿದ್ದಾರೆ. ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರವನ್ನು ಒತ್ತಾಯಿಸಲು ಕಳೆದ ವರ್ಷ ನವೆಂಬರ್ 26 ರಂದು ಅವರು ತಮ್ಮ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು.
ಜನವರಿಯಲ್ಲಿ ಕೇಂದ್ರ ಸರ್ಕಾರ ರೈತ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದ ನಂತರ, ದಲ್ಲೆವಾಲ್ ಖಾನೌರಿ ಪ್ರತಿಭಟನಾ ಸ್ಥಳದಲ್ಲಿ ವೈದ್ಯಕೀಯ ನೆರವು ಪಡೆಯಲು ಪ್ರಾರಂಭಿಸಿದ್ದರು. ಆದರೆ ತಮ್ಮ ಉಪವಾಸವನ್ನು ಕೊನೆಗೊಳಿಸಿರಲಿಲ್ಲ. ಶನಿವಾರ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ದಲ್ಲೇವಾಲ್ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವಂತೆ ಮನವಿ ಮಾಡಿದ್ದರು.