ಅಹ್ಮದಾಬಾದ್: ಗುಜರಾತ್ ರಾಜಧಾನಿ ಅಹ್ಮದಾಬಾದ್ ನ ಅಪಾರ್ಟ್ ಮೆಂಟ್ ವೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯಲ್ಲಿ ಸಿಲುಕಿದ್ದ ಕುಟುಂಬವೊಂದನ್ನು ಸ್ಥಳೀಯರು ರಕ್ಷಣೆ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಅಹ್ಮದಾಬಾದ್ ನ ಖೋಖರಾ ಪ್ರದೇಶದಲ್ಲಿರುವ ಪರಿಷ್ಕರ್-1 ಜನವಸತಿ ಅಪಾರ್ಟ್‌ಮೆಂಟ್ ಸಂಕೀರ್ಣದ ನಾಲ್ಕನೇ ಮಹಡಿಯಲ್ಲಿ ಸಂಜೆ 4 ಗಂಟೆ ವೇಳೆ ಬೆಂಕಿ ಕಾಣಿಸಿಕೊಂಡಿತ್ತು.
ನೋಡ ನೋಡುತ್ತಲೇ ಬೆಂಕಿ ವ್ಯಾಪಿಸಿದ್ದು ಈ ವೇಳೆ ನಾಲ್ಕನೇ ಅಂತಸ್ತಿನಲ್ಲಿದ್ದ ಒಂದು ಕುಟುಂಬ ಮೆಟ್ಟಿಲುಗಳ ಮೂಲಕ ಹೊರಗೆ ಬರಲು ಯತ್ನಿಸಿದೆ. ಆದರೆ ಮೆಟ್ಟಿಲುಗಳಿಗೂ ಬೆಂಕಿ ವ್ಯಾಪಿಸಿದ್ದರಿಂದ ಅವರು ಓಡಿ ಬರಲು ಸಾಧ್ಯವಾಗಿಲ್ಲ.
ಈ ವೇಳೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಅಪಾಯಕ್ಕೆ ಸಿಲುಕಿದ್ದರು. ಅಪಾಯದಿಂದ ಪಾರಾಗಲು ಅವರು ಯತ್ನಿಸಿದರು. ಅಷ್ಟು ಹೊತ್ತಿಗೆ ಕೆಳಗಿನ ಅಂತಸ್ತಿಗೂ ಬೆಂಕಿ ವ್ಯಾಪಿಸಿದ್ದೂ ಮೇಲೆ ಹೋಗಲೂ ಆಗದೆ, ಕೆಳಗೆ ಬರಲೂ ಆಗದೇ ಆ ಕುಟುಂಬ ಸಂಕಷ್ಟದಲ್ಲಿ ಸಿಲುಕಿತ್ತು.
ನೆರವಿಗೆ ಧಾವಿಸಿದ ಸ್ಥಳೀಯರು
ಈ ವೇಳೆ ಸ್ಥಳೀಯ ನಿವಾಸಿಗಳು ಆ ಕುಟುಂಬದ ನೆರವಿಗೆ ಧಾವಿಸಿದ್ದು. ಕೂಡಲೇ ಮೂರನೇ ಮಹಡಿಗೆ ಹೋಗಿ ಮಕ್ಕಳನ್ನು ರಕ್ಷಿಸಲು ಯತ್ನಿಸಿದ್ದಾರೆ. ಮೊದಲು ತೆರೆದ ಕಿಟಕಿ ಮೂಲಕ ಇಬ್ಬರು ಮಕ್ಕಳನ್ನು ಮೇಲಿಂದ ಕೆಳಗೆ ಇಳಿಸಿಕೊಂಡು ರಕ್ಷಣೆ ಮಾಡಿದ್ದು ಬಳಿಕ ಮಹಿಳೆಯರನ್ನೂ ರಕ್ಷಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಎಲ್ಲರ ರಕ್ಷಣೆ
ಇದೇ ಹೊತ್ತಲ್ಲೇ ವಿಚಾರ ತಿಳಿದು ಏಳು ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು. ಬಳಿಕ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಅಲ್ಲದೆ ಅಪಾರ್ಟ್ ಮೆಂಟ್ ನಲ್ಲಿ ಅಪಾಯಕ್ಕೆ ತುತ್ತಾಗಿದ್ದ ಸುಮಾರು 18 ಮಂದಿಯನ್ನು ರಕ್ಷಿಸಿದರು.