ನವದೆಹಲಿ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ, ಉದ್ಯಮಿ ರಾಬರ್ಟ್ ವಾದ್ರಾ ಅವರು ಸಕ್ರಿಯ ರಾಜಕೀಯ ಪ್ರವೇಶಿಸುವ ಇಚ್ಛೆ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಪಕ್ಷ ಮತ್ತು ಕುಟುಂಬ ಬಯಸಿದರೆ ಬರುವುದಾಗಿ ಸೋಮವಾರ ಹೇಳಿದ್ದಾರೆ.
ಇಂದು ANI ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವಾದ್ರಾ, ಗಾಂಧಿ ಕುಟುಂಬದೊಂದಿಗಿನ ಸಂಬಂಧದಿಂದಾಗಿ ರಾಜಕೀಯ ನಂಟು ಸಹ ಇದೆ. ಹಲವು ಬಾರಿ ತಮ್ಮನ್ನು ರಾಜಕೀಯ ವಿಚಾರಗಳಿಗೆ ಎಳೆದು ತಂದಿದ್ದಾರೆ. ಅನೇಕ ರಾಜಕೀಯ ಪಕ್ಷಗಳು ತಮ್ಮ ಹೆಸರನ್ನು ಬಳಸಿಕೊಂಡಿವೆ" ಎಂದಿದ್ದಾರೆ.
"ನಾನು ಗಾಂಧಿ ಕುಟುಂಬದ ಸದಸ್ಯನಾಗಿರುವುದರಿಂದ ನನ್ನನ್ನು ಹಲವು ಬಾರಿ ರಾಜಕೀಯಕ್ಕೆ ಎಳೆದು ತರುತ್ತಲೇ ಇರುತ್ತಾರೆ. ಪತ್ನಿ ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸಂಸತ್ತಿನ ಕಲಾಪಗಳಲ್ಲಿ ಉತ್ತಮವಾಗಿ ಭಾಗವಹಿಸುತ್ತಾರೆ. ಅವರಿಂದ ಕಲಿಯುವುದು ತುಂಬಾ ಇದೆ" ಎಂದು ವಾದ್ರಾ ಹೇಳಿದ್ದಾರೆ.
"ಪ್ರಿಯಾಂಕಾ ಮೊದಲು ಸಂಸತ್ತಿನಲ್ಲಿ ಇರಬೇಕೆಂದು ನಾನು ಯಾವಾಗಲೂ ಹೇಳುತ್ತಿದ್ದೆ ಮತ್ತು ಅವರು ಈಗ ಸಂಸದೆ ಆಗಿದ್ದಾರೆ. ಪ್ರಿಯಾಂಕಾ ಪಕ್ಷ ಮತ್ತು ಕ್ಷೇತ್ರಕ್ಕಾಗಿ ತುಂಬಾ ಶ್ರಮಿಸುತ್ತಿದ್ದಾರೆ" ಎಂದರು.