ಭುವನೇಶ್ವರ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಚಾರ್ಜ್ ಶೀಟ್ ಸಲ್ಲಿಸಿದ ಬೆನ್ನಲ್ಲೇ ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬುಧವಾರ EDಯನ್ನು ಮುಚ್ಚಬೇಕು ಎಂದು ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶ್ರೀಕಾಂತ್ ಜೆನಾ ಅವರೊಂದಿಗೆ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್ ಅವರು, ಇಡಿ ಕೇಂದ್ರದ ಕೈಗೊಂಬೆಯಾಗಿದ್ದು, ಈಗ ಅದನ್ನು ವಿರೋಧ ಪಕ್ಷದ ನಾಯಕರಿಗೆ ಕಿರುಕುಳ ನೀಡಲು ಮತ್ತು ಅವರ ಧ್ವನಿ ಅಡಗಿಸಲು ಒಂದು ಸಾಧನವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು.
ಆರ್ಥಿಕ ಅಪರಾಧಗಳನ್ನು ನಿಭಾಯಿಸಲು ಆದಾಯ ತೆರಿಗೆ ಇಲಾಖೆ ಮತ್ತು GST ಅಧಿಕಾರಿಗಳಂತಹ ಹಲವಾರು ಸಂಸ್ಥೆಗಳು ಇರುವುದರಿಂದ ED ಯ ಅಗತ್ಯವಿಲ್ಲ. ಅದನ್ನು ಮುಚ್ಚಬೇಕು ಎಂದು ಮಾಜಿ ಸಿಎಂ ಆಗ್ರಹಿಸಿದರು.
ನಮ್ಮ ಪಕ್ಷ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳು ಈ ಹಿಂದೆ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ED ರಚನೆಯನ್ನು ವಿರೋಧಿಸಿದ್ದವು ಮತ್ತು ನಂತರ ಆ ಸಂಸ್ಥೆಯನ್ನು ನಿಮ್ಮ ವಿರುದ್ಧವೂ ಬಳಸಬಹುದು ಎಂದು ಎಚ್ಚರಿಸಿದ್ದವು ಎಂದು ಎಸ್ಪಿ ಮುಖ್ಯಸ್ಥ ತಿಳಿಸಿದ್ದಾರೆ.
"ನನ್ನ ಪ್ರಕಾರ, ಇಡಿಯಂತಹ ಇಲಾಖೆಯನ್ನು ರದ್ದುಗೊಳಿಸಬೇಕು. ನಾನು ಕಾಂಗ್ರೆಸ್ ಗೆ ಕೂಡ ಇಡಿ ಮುಚ್ಚುವಂತೆ ಒತ್ತಾಯಿಸುವಂತೆ ಕೇಳುತ್ತೇನೆ. ಅಂತಹ ಸಂಸ್ಥೆ ಅಸ್ತಿತ್ವದಲ್ಲಿದ್ದರೆ, ನೀವು ನಿಮ್ಮ ಸ್ವಂತ ಕಾರ್ಯವಿಧಾನಗಳನ್ನು ನಂಬುವುದಿಲ್ಲ" ಎಂದರು.