ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಯಭೀತರಾಗಿರುವ ಪ್ರವಾಸಿಗರು, ವಿಮಾನಗಳಿಗೆ ಕಾಯದೆ ರೈಲು ಮಾರ್ಗಗಳ ಆಯ್ಕೆ ಮಾಡಿ ತವರು ತಲುಪಲು ಹಾತೊರೆಯುತ್ತಿದ್ದಾರೆ.
ದಾಳಿ ನಡೆದ ಕೇವಲ ಎರಡು ದಿನಗಳಲ್ಲಿ ಸುಮಾರು 4,000 ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರದಿಂದ ಹೊರ ನಡೆದಿದ್ದಾರೆಂದು ತಿಳಿದುಬಂದಿದೆ.
ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಿಮಾಂಶು ಎಸ್ ಉಪಾಧ್ಯಾಯ ಅವರು ಮಾತನಾಡಿ, ರೈಲುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಎರಡು ವಿಶೇಷ ರೈಲುಗಳನ್ನು ಓಡಿಸುವುದರ ಜೊತೆಗೆ, ಜನರಿಗೆ ಮತ್ತಷ್ಟು ಸ್ಥಳಾವಕಾಶ ಕಲ್ಪಿಸಲು ಸಾಮಾನ್ಯ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತಿದೆ. ಪ್ರವಾಸಿಗರಿಗೆ ಮಾರ್ಗವನ್ನು ಸುಗಮಗೊಳಿಸಲು ಕಾಶ್ಮೀರದ ರೈಲ್ವೆ ನಿಲ್ದಾಣಗಳಲ್ಲಿ 24x7 ಆಹಾರ ಮಳಿಗೆಗಳನ್ನೂ ಕೂಡ ತೆರೆಯಲಾಗಿದೆ ಎಂದು ಹೇಳಿದ್ದಾರೆ.
ಪ್ರಯಾಣಿಕರು ಬಸ್‌ಗಳು ಮತ್ತು ಟ್ಯಾಕ್ಸಿಗಳ ಮೂಲಕ ಶ್ರೀ ವೈಷ್ಣವೋ ದೇವಿ ಕತ್ರಾ ಅಥವಾ ಜಮ್ಮು ರೈಲು ನಿಲ್ದಾಣಗಳನ್ನು ತಲುಪುತ್ತಿದ್ದಾರೆ. ಕತ್ರಾದಿಂದ ಜಮ್ಮು ಮೂಲಕ ನವದೆಹಲಿಗೆ ಎರಡು ವಿಶೇಷ ರೈಲುಗಳನ್ನು ಚಲಿಸಲಾಗುತ್ತಿದೆ. ಈ ರೈಲುಗಳಲ್ಲಿ ಕನಿಷ್ಠ 1,500 ಪ್ರಯಾಣಿಕರನ್ನು ಸಾಗಿಸಲಾಗಿದೆ.
ಮೊದಲ ವಿಶೇಷ ರೈಲು (ರೈಲು ಸಂಖ್ಯೆ 04612) ಏಪ್ರಿಲ್ 23 ರಂದು ಕಾರ್ಯಾಚರಣೆ ನಡೆಸಿದ್ದರೆ, ಎರಡನೇ ವಿಶೇಷ ರೈಲು (ರೈಲು ಸಂಖ್ಯೆ 04625) ಏಪ್ರಿಲ್ 24 ರಂದು ಕಾರ್ಯಾಚರಣೆ ನಡೆಸಿದೆ. ರೈಲುಗಳು ಉಧಮ್‌ಪುರ, ಜಮ್ಮು, ಪಠಾಣ್‌ಕೋಟ್, ಜಲಂಧರ್, ಅಂಬಾಲ, ಕುರುಕ್ಷೇತ್ರ ಮತ್ತು ಪಾಣಿಪತ್‌ನಲ್ಲಿ ನಿಲುಗಡೆಗಳನ್ನು ಹೊಂದಿದ್ದವು.
ಇದರ ಜೊತೆಗೆ, ಶಾಲಿಮಾರ್ ಮಲಾನಿ (ರೈಲು ಸಂಖ್ಯೆ 14662) ಮತ್ತು ಕೋಲ್ಕತ್ತಾ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 13152) ಸೇರಿದಂತೆ ರಾಜ್ಯದಿಂದ ಹೊರಟ ಕೆಲವು ಸಾಮಾನ್ಯ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗಿತ್ತು.
ಪ್ರವಾಸಿಗರಿಗೆ ಆದ್ಯತೆ ನೀಡಲಾಗಿದ್ದು, ಕೊನೆಯ ಕ್ಷಣದಲ್ಲಿಯೂ ಜನರಿಗೆ ರೈಲುಗಳಲ್ಲಿ ಸ್ಥಳಾವಕಾಶ ಕಲ್ಪಿಸಿದ್ದೇವೆ" ಎಂದು ತಿಳಿಸಿದ್ದಾರೆ.
ಶುಕ್ರವಾರದ ವೇಳೆಗೆ ಜನದಟ್ಟಣೆ ಕಡಿಮೆಯಾಗಿತ್ತು. ಆದ್ದರಿಂದ ಏಪ್ರಿಲ್ 25 ರಂದು ಯಾವುದೇ ವಿಶೇಷ ರೈಲುಗಳ ಸಂಚಾರದ ಅಗತ್ಯವಿರಲಿಲ್ಲ ಎಂದು ಹೇಳಿದರು.
ನಿಲ್ದಾಣಗಳಲ್ಲಿ 24x7 ಆಹಾರ ಮಳಿಗೆಗಳನ್ನು ತೆರೆಯಲಾಗಿತ್ತು. ಎಲ್ಲಾ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಮತ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಜಮ್ಮುವಿನಲ್ಲಿ 'ಮಿನಿ ವಾರ್ ರೂಮ್'ನ್ನೂ ಕೂಡ ತೆರೆಯಲಾಗಿತ್ತು. ಎಲ್ಲಾ ನಿಲ್ದಾಣಗಳಲ್ಲಿಯೂ ಸಹಾಯ ಕೇಂದ್ರಗಳನ್ನು ತೆರೆಯಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.