ಅಮೃತಸರ: 26 ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಟ್ಟಾರಿ-ವಾಘಾ ಗಡಿಯಲ್ಲಿ ನಡೆಯುವ ರಿಟ್ರೀಟ್ ಸಮಾರಂಭದಲ್ಲಿ ಭಾಗವಹಿಸುವ ಪ್ರವಾಸಿಗರ ಸಂಖ್ಯೆ ಶೇ. 50 ರಷ್ಟು ಕಡಿಮೆಯಾಗಿದೆ.
ಇನ್ನು ಅಮೃತಸರದ ಸ್ವರ್ಣ ದೇವಾಲಯದಲ್ಲೂ ಪ್ರವಾಸಿಗರ ಸಂಖ್ಯೆ ಶೇ. 20 ಕ್ಕಿಂತ ಹೆಚ್ಚು ಕಡಿಮೆಯಾಗಿದೆ.
ಅಟ್ಟಾರಿ ಗಡಿಯಲ್ಲಿರುವ ವೀಕ್ಷಕರ ಗ್ಯಾಲರಿ 25,000 ಜನರ ಸಾಮರ್ಥ್ಯವನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ. ವಾರದ ದಿನಗಳಲ್ಲಿ, ಸರಾಸರಿ ಜನರ ಸಂಖ್ಯೆ ಸುಮಾರು 20,000 ರಷ್ಟಿದ್ದರೆ, ವಾರಾಂತ್ಯದಲ್ಲಿ ಸಾಮಾನ್ಯವಾಗಿ ತುಂಬಿರುತ್ತದೆ. ಆದಾಗ್ಯೂ, ಗುರುವಾರ ಮತ್ತು ಶುಕ್ರವಾರ, ಕೇವಲ 10,000 ಪ್ರವಾಸಿಗರು ಮಾತ್ರ ಬಿಎಸ್‌ಎಫ್ ರಿಟ್ರೀಟ್ ಅನ್ನು ವೀಕ್ಷಿಸಲು ಬಂದಿದ್ದರು. ಇದು ಶೇ. 50 ರಷ್ಟು ಇಳಿಕೆ ಎಂದು ಬಿಎಸ್‌ಎಫ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ದಾಳಿ ದಾಳಿಯ ನಂತರ, ಬೀಟಿಂಗ್ ರಿಟ್ರೀಟ್ ಕಡಿಮೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಪ್ರಮುಖ ಬದಲಾವಣೆಗಳಲ್ಲಿ ಭಾರತೀಯ ಗಾರ್ಡ್ ಕಮಾಂಡರ್ ಮತ್ತು ಪಾಕಿಸ್ತಾನದ ಗಾರ್ಡ್ ಕಮಾಂಡರ್ ನಡುವಿನ ಸಾಂಕೇತಿಕ ಹಸ್ತಲಾಘವವನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಸಮಾರಂಭದ ಸಮಯದಲ್ಲಿ ಗೇಟ್‌ಗಳು ಮುಚ್ಚಲ್ಪಟ್ಟಿರುತ್ತವೆ" ಎಂದು ಅಧಿಕಾರಿ ಹೇಳಿದ್ದಾರೆ.
ಅಟ್ಟಾರಿಯಲ್ಲಿ ಪ್ರವಾಸಿಗರು "ಹಿಂದೂಸ್ತಾನ್ ಜಿಂದಾಬಾದ್," "ಭಾರತ್ ಮಾತಾ ಕಿ ಜೈ" ಮತ್ತು "ವಂದೇ ಮಾತರಂ" ನಂತಹ ಘೋಷಣೆಗಳನ್ನು ಕೂಗಿದರು, ರಾಷ್ಟ್ರೀಯ ಧ್ವಜಗಳನ್ನು ಬೀಸಿದರು ಮತ್ತು ಅವರ ಮುಖದ ಮೇಲೆ ತ್ರಿವರ್ಣವನ್ನು ಚಿತ್ರಿಸಿಕೊಂಡಿದ್ದರು.
"ತಮ್ಮ ಜೀವಗಳನ್ನು ಪಣಕ್ಕಿಟ್ಟು ನಮ್ಮ ದೇಶದ ಗಡಿಗಳನ್ನು ಭದ್ರಪಡಿಸುತ್ತಿರುವ ನಮ್ಮ ಸೈನಿಕರನ್ನು ಬೆಂಬಲಿಸಲು ನಾವು ಇಲ್ಲಿಗೆ ಬಂದಿದ್ದೇವೆ" ಎಂದು ಪ್ರವಾಸಿಗರೊಬ್ಬರು ತಿಳಿಸಿದ್ದಾರೆ.
ಏತನ್ಮಧ್ಯೆ, ಸಾಮಾನ್ಯವಾಗಿ ನಿತ್ಯ ಸುಮಾರು 1.25 ಲಕ್ಷ ಭಕ್ತರು ಭೇಟಿ ಮಾಡುವ ಅಮೃತಸರದ ಸ್ವರ್ಣ ದೇವಾಲಯದಲ್ಲಿ ಕಳೆದ ಎರಡು ದಿನಗಳಿಂದ ಭಕ್ತರ ಸಂಖ್ಯೆ ಸುಮಾರು 75,000 ರಿಂದ 80,000 ಕ್ಕೆ ಇಳಿದಿದೆ.