ಕರ್ನೂಲ್: ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಪೊಲೀಸರ ಮೇಲೆಯೇ ಸಚಿವರೊಬ್ಬರ ಸಹೋದರ ಹಲ್ಲೆ ಮಾಡಿರುವ ವಿಡಿಯೊವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಆಂಧ್ರಪ್ರದೇಶದ ಸಚಿವ ಬಿಸಿ ಜನಾರ್ದನ ರೆಡ್ಡಿ ಸಹೋದರ ಮದನ್ ಭೂಪಾಲ್ ರೆಡ್ಡಿ ದೇವಸ್ಥಾನದಲ್ಲಿ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಕರ್ನೂಲಿನಲ್ಲಿ ನಡೆದಿದೆ.
ಕರ್ನೂಲು ಜಿಲ್ಲೆಯ ಕೋಳಿಮಿಗುಂಡ್ಲಾದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಮದನ್ ಭೂಪಾಲ್ ರೆಡ್ಡಿ ಕಾನ್‌ಸ್ಟೆಬಲ್ ಒಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆಗಿದ್ದೇನು?
ಕೋಳಿಮಿಗಂಡ್ಲ ಲಕ್ಷ್ಮಿ ನರಸಿಂಹ ದೇವಾಲಯದ ನವೀಕರಣ ಕಾರ್ಯ ನಡೆಸಲಾಗಿತ್ತು. ಈ ಕಾಮಗಾರಿಗಳು ಪೂರ್ಣಗೊಂಡ ನಂತರ, ಆಗಮ ಶಾಸ್ತ್ರದ ಪ್ರಕಾರ ಉದ್ಘಾಟನಾ ಸಮಾರಂಭವನ್ನು ನಡೆಸಲಾಯಿತು. ಬುಧವಾರ ಕುಂಭಾಭಿಷೇಕ ಮತ್ತು ನಿತ್ಯ ಕಲ್ಯಾಣಂ ನಡೆಯಿತು. ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ, ತಮ್ಮ ಸಹೋದರನನ್ನು ಒಳಗೆ ಬಿಡದಿದ್ದಾಗ ಅವರು ಕೋಪ ವ್ಯಕ್ತಪಡಿಸಿದರು.
ಬುಧವಾರ ದೇವಾಲಯದ ಉದ್ಘಾಟನೆ ವೇಳೆ ಈ ಹಲ್ಲೆ ಘಟನೆ ನಡೆದಿದ್ದು, ಆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಹಾಜರಿದ್ದರು. ಟಿಡಿಪಿ ನಾಯಕನ ಸಹೋದರ ದೇವಸ್ಥಾನಕ್ಕೆ ತಕ್ಷಣ ಪ್ರವೇಶಿಸಲು ಮುಂದಾದರು.
ಈ ವೇಳೆ ಜನಸಂದಣಿಯನ್ನು ನಿರ್ವಹಿಸಲು ಕರ್ತವ್ಯದಲ್ಲಿದ್ದ ಜಶ್ವಂತ್ ಎಂದು ಗುರುತಿಸಲಾದ ಕಾನ್‌ಸ್ಟೆಬಲ್ ಅವರನ್ನು ತಡೆದಿದ್ದು, ಈ ವೇಳೆ ಮದನ್ ಭೂಪಾಲ್ ರೆಡ್ಡಿ ನಾನು ಯಾರು ಗೊತ್ತಾ ಎಂದು ಹೇಳಿ ಗಲಾಟೆ ತೆಗೆದಿದ್ದಾರೆ. ಅಲ್ಲದೆ ಕೂಡಲೇ ನನ್ನನ್ನು ಒಳಗೆ ಬಿಡು ಎಂದು ಕೇಳಿದ್ದಾರೆ.
ಆದರೆ ಪೊಲೀಸ್ ಆತನ ಕೋರಿಕೆಯನ್ನು ನಿರಾಕರಿಸಿದಾಗ, ಮದನ್ ಆತನನ್ನು ಮಾತಿನಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ತಿರುಗೇಟು ಕೊಟ್ಟ ಪೊಲೀಸ್
ಮದನ್ ಭೂಪಾಲ್ ರೆಡ್ಡಿ ಹಲ್ಲೆ ಮಾಡುತ್ತಲೇ ಪೊಲೀಸರು ಕೂಡ ತಿರುಗಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಟಿಡಿಪಿ ಸಚಿವರು ದಾಳಿಯನ್ನು ಖಂಡಿಸಿದ್ದಾರೆ. ಅವರು ತಮ್ಮ ಸಹೋದರನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವೈಸಿಪಿ ಆಕ್ರೋಶ
ಇನ್ನು ಈ ಘಟನೆಯನ್ನು ಪ್ರತಿಪಕ್ಷ ವೈಸಿಪಿ ತೀವ್ರವಾಗಿ ಖಂಡಿಸಿದ್ದು, 'ಟಿಡಿಪಿ ನಾಯಕರು ಮತ್ತು ಅವರ ಕುಟುಂಬ ಸದಸ್ಯರು ದುರಹಂಕಾರ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಕೊನೆಗೂ ಬಂಧನ
ಇನ್ನು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನೂಲು ಪೊಲೀಸರು ಇದೀಗ ಸಚಿವರ ಸಹೋದರ ಮದನ್ ಭೂಪಾಲ್ ರೆಡ್ಡಿಯನ್ನು ಬಂಧಿಸಿದ್ದಾರೆ.