ಉತ್ತರಕಾಶಿ: ಉತ್ತರಕಾಶಿ ಜಿಲ್ಲೆಯ ಧರಾಲಿ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಮೂರು ಗಂಟೆಗಳ ಅವಧಿಯಲ್ಲಿ ಮೂರು ಬಾರಿ ಮೇಘಸ್ಪೋಟವಾಗಿದ್ದು, ಭಾರಿ ಪ್ರವಾಹದಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಒಂಬತ್ತು ಸೇನಾ ಸಿಬ್ಬಂದಿ ಸೇರಿದಂತೆ 59 ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಭಾರತೀಯ ಸೇನೆ ಮತ್ತು ಪರಿಹಾರ ತಂಡಗಳಿಂದ ಬೃಹತ್ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
TNIE ಯೊಂದಿಗೆ ಮಾತನಾಡಿದ ರಕ್ಷಣಾ (PRO) ಲೆಫ್ಟಿನೆಂಟ್ ಕರ್ನಲ್ ಮನೀಶ್ ಶ್ರೀವಾಸ್ತವ, ಡೆಹ್ರಾಡೂನ್ ದುರಂತದ ಪ್ರಮಾಣ ಮತ್ತು ಸೇನೆಯ ತಕ್ಷಣದ ಕಾರ್ಯಾಚರಣೆಯನ್ನು ದೃಢಪಡಿಸಿದರು.
ಖೀರ್ ಗಡ್, ಧರಾಲಿಯಲ್ಲಿ ಸಂಭವಿಸಿದ ವಿನಾಶಕಾರಿ ಮಣ್ಣಿನ ಕುಸಿತದ ಹಿನ್ನೆಲೆಯಲ್ಲಿ, 14 RAJRIF ನ ಕಮಾಂಡಿಂಗ್ ಆಫೀಸರ್ ಕರ್ನಲ್ ಹರ್ಷವರ್ಧನ್ ಅವರು ವೈಯಕ್ತಿಕವಾಗಿ 150 ಸಿಬ್ಬಂದಿಯನ್ನು ನಿರ್ಣಾಯಕ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಮುನ್ನಡೆಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಆರಂಭದಲ್ಲಿ ಕಣ್ಮರೆಯಾಗಿದ್ದ 11 ಸೇನಾ ಸಿಬ್ಬಂದಿಗಳಲ್ಲಿ ಇಬ್ಬರು ಸುರಕ್ಷಿತವಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಇದುವರೆಗೆ 20 ನಾಗರಿಕರನ್ನು ಸಹ ರಕ್ಷಿಸಲಾಗಿದೆ. ಭರದಿಂದ ರಕ್ಷಣಾ ಕಾರ್ಯಾಚರಣೆ ಸಾಗಿದೆ. ಪ್ರತಿಕೂಲ ಹವಾಮಾನ ಮತ್ತು ಸಂಪರ್ಕ ಕಡಿತದ ಸವಾಲಿನ ನಡುವೆ ಸೇನೆಯ ಬದ್ಧತೆಯನ್ನು ಅವರು ಶ್ಲಾಘಿಸಿದ್ದಾರೆ.
ಮೊದಲ ಮೇಘಸ್ಫೋಟದಿಂದ ಧಾರಾಲಿ ಗ್ರಾಮದ ಕಡೆಗೆ ಮಣ್ಣು, ಗುಡ್ಡ ಕುಸಿತ, ಕೆಸರು ನೀರು ಹರಿಯುವುದರೊಂದಿಗೆ ಭಾರಿ ಆತಂಕ ಸೃಷ್ಟಿಯಾಯಿತು. ಜನರು ಭಯದಿಂದ ಕಿರುಚಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಹರ್ಸಿಲ್ ಸೇನಾ ಶಿಬಿರದ ಮುಂಭಾಗದಲ್ಲಿರುವ ಹರ್ಸಿಲ್‌ನಲ್ಲಿರುವ ಸೇನಾ ಘಟಕದ ಬಳಿ ಮಂಗಳವಾರ ಸಂಜೆ ಎರಡನೇ ಮೇಘಸ್ಫೋಟ ಸಂಭವಿಸಿದೆ.
ಸುಖಿ ಟಾಪ್‌ನಲ್ಲಿ ಮೂರನೇ ಮೇಘಸ್ಫೋಟ ಸಂಭವಿಸಿದೆ. ಇದರಿಂದಾಗಿ ಸೇನಾ ಶಿಬಿರದ ಬಳಿ ತಾತ್ಕಾಲಿಕ ಸರೋವರವನ್ನೆ ಸೃಷ್ಟಿಸಿತು. ಈ ಹೊಸ ಜಲಮೂಲವು ಭಾಗೀರಥಿ ನದಿಯ ಉದ್ದಕ್ಕೂ ಇರುವ ಪಟ್ಟಣಗಳಿಗೆ ಗಮನಾರ್ಹ ಅಪಾಯವನ್ನುಂಟುಮಾಡಿದೆ. ಸುಖಿ ಟಾಪ್ ಘಟನೆಯು ಹರ್ಸಿಲ್‌ಗೆ ಹೋಗುವ ರಸ್ತೆಯನ್ನು ಬಂದ್ ಮಾಡಿದೆ.
ಅವಶೇಷಗಳಡಿಯಲ್ಲಿ ಹೂತುಹೋದ ಪ್ರಾಚೀನ ಶಿವ ದೇವಾಲಯ: ಮಂಗಳವಾರ ಖೀರ್ ಗಂಗಾ ನದಿಯಲ್ಲಿ ಉಂಟಾದ ಪ್ರವಾಹದಿಂದ ಉತ್ತರಕಾಶಿಯ ಪುರಾತನ ಕಲ್ಪ್ ಕೇದಾರ್ ದೇವಾಲಯ ಅವಶೇಷಗಳಡಿ ಹೂತುಹೋಗಿದೆ. ಕಟೂರ್ ಶೈಲಿಯಲ್ಲಿ ನಿರ್ಮಿಸಲಾದ ಶಿವ ದೇವಾಲಯದ ವಾಸ್ತುಶಿಲ್ಪವು ಕೇದಾರನಾಥ ಧಾಮವನ್ನು ಹೋಲುತ್ತದೆ.
ಮೇಘಸ್ಫೋಟದ ವಿಷಯ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಆಂಧ್ರಪ್ರದೇಶ ಪ್ರವಾಸ ಮೊಟಕುಗೊಳಿಸಿ, ಡೆಹ್ರಾಡೂನ್‌ನಲ್ಲಿರುವ ವಿಪತ್ತು ಕಾರ್ಯಾಚರಣೆ ಕೇಂದ್ರಕ್ಕೆ ಮಂಗಳವಾರ ಸಂಜೆ ಆಗಮಿಸಿದರು. ಅಲ್ಲಿ ಅವರು ಹರ್ಸಿಲ್ ಪ್ರದೇಶದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಪಡೆದರು. ತುರ್ತು ಸೇವೆಗಳನ್ನು ಹೊರತುಪಡಿಸಿ ಪ್ರವಾಹ ಪೀಡಿತ ಪ್ರದೇಶದ ಎಲ್ಲಾ ಶಿಕ್ಷಣ ಮತ್ತು ಇತರ ಸಂಸ್ಥೆಗಳನ್ನು ಮುಚ್ಚುವಂತೆ ಮುಖ್ಯಮಂತ್ರಿಗಳು ಶಿಕ್ಷಣ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿಯ ಹೆಚ್ಚುವರಿ ಕಾರ್ಯದರ್ಶಿ ಬನ್ಶಿಧರ್ ತಿವಾರಿ TNIE ಗೆ ತಿಳಿಸಿದ್ದಾರೆ.
ಸ್ಥಳಾಂತರಗೊಂಡವರಿಗೆ ವಸತಿ, ಆಹಾರ ಮತ್ತು ಔಷಧಿಗಳ ವ್ಯವಸ್ಥೆಯನ್ನು ಕಲ್ಪಿಸುವಂತೆ ಹಾಗೂ ಸಂತ್ರಸ್ತರನ್ನು ಏರ್ ಲಿಫ್ಟ್ ಮಾಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶಿಸಿದ್ದಾರೆ. ಯಾರಾದರೂ ತಮ್ಮ ಕುಟುಂಬವನ್ನು ಕಳೆದುಕೊಂಡಿದ್ದರೆ, ಸರ್ಕಾರ ಅವರ ಜೊತೆ ನಿಂತಿದೆ.ಅವರ ಜೀವನೋಪಾಯದ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ಹೊರುತ್ತದೆ ಎಂದು ಸಿಎಂ ಧಾಮಿ ಭರವಸೆ ನೀಡಿದ್ದಾರೆ.