ನವದೆಹಲಿ: ಚೀನಾ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ಬಿಜೆಪಿ ಬುಧವಾರ ತಿಳಿಸಿದೆ.
ಪ್ರಿಯಾಂಕಾ ಗಾಂಧಿಯವರ ಸಾರ್ವಜನಿಕ ಹೇಳಿಕೆಯು ನ್ಯಾಯಾಂಗ ನಿಂದನೆಗೆ ಸಮಾನವಾಗಿದೆ ಎಂದು ಬಿಜೆಪಿ ಸಂಸದ ಮತ್ತು ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಆರೋಪಿಸಿದ್ದಾರೆ.
ANI ಜೊತೆ ಮಾತನಾಡಿದ ಮಿಶ್ರಾ, "ಅವರು ಮಾಧ್ಯಮಗಳ ಮುಂದೆ ಹಲವು ಹೇಳಿಕೆಗಳನ್ನು ನೀಡುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿದ ಅವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಿದ್ದೇವೆ. ವಕೀಲರು ಅರ್ಜಿಯನ್ನು ಸಲ್ಲಿಸುತ್ತಾರೆ. ಈ ದೇಶದ ಜನ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ಸಹಿಸುವುದಿಲ್ಲ" ಎಂದಿದ್ದಾರೆ.
ಚೀನಾ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು ಮತ್ತು ನೀವು ನಿಜವಾದ ಭಾರತೀಯ ಆಗಿದ್ದರೆ ಈ ರೀತಿ ಹೇಳಿಕೆ ನೀಡುತ್ತಿರಲಿಲ್ಲ ಎಂದು ಹೇಳಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಿಯಾಂಕಾ ಗಾಂಧಿ, ಯಾರು ನಿಜವಾದ ಭಾರತೀಯ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶರು ನಿರ್ಧರಿಸಲು ಸಾಧ್ಯವಿಲ್ಲ ಮತ್ತು ಇದು ಅವರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದರು.