ನವದೆಹಲಿ: ರಷ್ಯಾದ ತೈಲ ಆಮದುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಅಮೆರಿಕದ ನಿರ್ಧಾರವನ್ನು ಭಾರತ ತೀವ್ರವಾಗಿ ಖಂಡಿಸಿದ್ದು ಈ ಕ್ರಮವನ್ನು 'ಅನ್ಯಾಯ, ನ್ಯಾಯಸಮ್ಮತವಲ್ಲ ಮತ್ತು ಅಸಮಂಜಸ' ಎಂದು ಕರೆದಿದೆ.
ಅಮೆರಿಕಾ ಆಮದು ಮಾಡಿಕೊಳ್ಳುವ ಭಾರತದ ಉತ್ಪನ್ನಗಳ ಮೇಲೆ ಹೆಚ್ಚುವರಿಯಾಗಿ ಶೇ.25 ರಷ್ಟು ಸುಂಕ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ ನಂತರ ಭಾರತ ತೀಕ್ಷ್ಣವಾಗಿ ಖಂಡಿಸಿದೆ. ಇದು ಒಟ್ಟು ಸುಂಕದ ಹೊರೆಯನ್ನು ಶೇಕಡ 50ರಷ್ಟಕ್ಕೆ ಏರಿಸಿದೆ. ಇದು ಬ್ರೆಜಿಲ್ ಜೊತೆಗೆ ಯಾವುದೇ ದೇಶದ ಮೇಲೆ ವಿಧಿಸಲಾದ ಅತ್ಯಧಿಕ ಸುಂಕವಾಗಿದೆ. ಭಾರತದ ಇಂಧನ ಆಮದುಗಳು ಮಾರುಕಟ್ಟೆ ವಾಸ್ತವತೆಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಯಿಂದ ನಡೆಯುತ್ತದೆ ಎಂದು ವಿದೇಶಾಂಗ ಸಚಿವಾಲಯ (MEA) ಹೇಳಿದೆ.
ರಷ್ಯಾದಿಂದ ಭಾರತದ ತೈಲ ಆಮದುಗಳನ್ನು ಅಮೆರಿಕ ಗುರಿಯಾಗಿಸಿಕೊಂಡಿದೆ. ನಾವು ಈಗಾಗಲೇ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ನಮ್ಮ ಆಮದುಗಳು ಮಾರುಕಟ್ಟೆ ಅಂಶಗಳನ್ನು ಆಧರಿಸಿವೆ ಮತ್ತು 1.4 ಬಿಲಿಯನ್ ಭಾರತೀಯರಿಗೆ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು.
ಆದ್ದರಿಂದ, ಇತರ ಹಲವಾರು ದೇಶಗಳು ತಮ್ಮ ರಾಷ್ಟ್ರೀಯ ಹಿತಾಸಕ್ತಿಗಾಗಿ ತೆಗೆದುಕೊಳ್ಳುತ್ತಿರುವ ಕ್ರಮಗಳಿಗಾಗಿ ಅಮೆರಿಕವು ಭಾರತದ ಮೇಲೆ ಹೆಚ್ಚುವರಿ ಸುಂಕಗಳನ್ನು ವಿಧಿಸುವುದು ಅತ್ಯಂತ ದುರದೃಷ್ಟಕರ. ಈ ಕ್ರಮಗಳು ಅನ್ಯಾಯ, ನ್ಯಾಯಸಮ್ಮತವಲ್ಲ ಮತ್ತು ಅಸಮಂಜಸವೆಂದು ನಾವು ಪುನರುಚ್ಚರಿಸುತ್ತೇವೆ. ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭಾರತ ಹೇಳಿದೆ.