ಬೀಜಿಂಗ್: ಅಮೆರಿಕ ಭಾರತ ಸರಕುಗಳ ಆಮದಿನ ಮೇಲೆ ಶೇ.50 ರಷ್ಟು ಸುಂಕ ವಿಧಿಸಿರುವ ಕ್ರಮವನ್ನು ಚೀನಾ ಖಂಡಿಸಿದ್ದು, ಈ ಮೂಲಕ ಭಾರತಕ್ಕೆ ಬೆಂಬಲ ಸೂಚಿಸಿದೆ.
ಸುಂಕ ವಿಧಿಸಿದ ನಂತರ ಭಾರತಕ್ಕೆ ಚೀನಾದ ರಾಯಭಾರಿ ಕ್ಸು ಫೀಹಾಂಗ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆಯನ್ನು ಟೀಕಿಸಿದ್ದಾರೆ.
"ಬೆದರಿಸುವವನಿಗೆ ಒಂದು ಇಂಚು ಕೊಟ್ಟರೆ ಅವನು ಒಂದು ಮೈಲಿ ಆಕ್ರಮಿಸುತ್ತಾನೆ" ಎಂದು ಪರೋಕ್ಷವಾಗಿ ಅಮೆರಿಕಾ ನಡೆಯನ್ನು ಉಲ್ಲೇಖಿಸಿ X ನಲ್ಲಿ ಬರೆದಿರುವ ಚೀನಾದ ರಾಯಭಾರಿ ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ.
ಚೀನಾ ರಾಯಭಾರಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಬ್ರೆಜಿಲ್ ಅಧ್ಯಕ್ಷ ಲುಲಾ ಅವರ ಮುಖ್ಯ ಸಲಹೆಗಾರ ಸೆಲ್ಸೊ ಅಮೋರಿಮ್ ನಡುವಿನ ಮಾತುಕತೆಯ ಆಯ್ದ ಭಾಗವನ್ನು ಉಲ್ಲೇಖಿಸಿ ಪೋಸ್ಟ್ ಮಾಡಿರುವುದು ಮಹತ್ವ ಪಡೆದುಕೊಂಡಿದೆ.
"ಇತರ ದೇಶಗಳನ್ನು ನಿಗ್ರಹಿಸಲು ಸುಂಕಗಳನ್ನು ಅಸ್ತ್ರವಾಗಿ ಬಳಸುವುದು ಯುಎನ್ ಚಾರ್ಟರ್ ನ್ನು ಉಲ್ಲಂಘಿಸುತ್ತದೆ, ಡಬ್ಲ್ಯುಟಿಒ ನಿಯಮಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಇದು ಜನಪ್ರಿಯ ಮತ್ತು ಸಮರ್ಥನೀಯವೂ ಅಲ್ಲ" ಎಂದು ರಾಯಭಾರಿ ಅಮೆರಿಕಾವನ್ನು ಟೀಕಿಸಿದ್ದಾರೆ.
ಟ್ರಂಪ್ ತಂಡದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ದೇಶಗಳಲ್ಲಿ ಭಾರತವೂ ಸೇರಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಭಾರತದ ವಿಶಾಲವಾದ ಕೃಷಿ ಮತ್ತು ಡೈರಿ ವಲಯಗಳನ್ನು ತೆರೆಯುವ ಮತ್ತು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವ ಬಗ್ಗೆ ಐದು ಸುತ್ತಿನ ಮಾತುಕತೆಗಳ ನಂತರ ಮಾತುಕತೆಗಳು ವಿಫಲವಾದವು.
ರಷ್ಯಾದ ತೈಲ ಖರೀದಿಯಿಂದಾಗಿ ಚೀನಾದ ಮೇಲೆ ಹೆಚ್ಚುವರಿ ಸುಂಕಗಳನ್ನು ವಿಧಿಸುವ ಟ್ರಂಪ್ ಬೆದರಿಕೆಗಳ ನಡುವೆ ಚೀನಾದ ರಾಯಭಾರಿಯ ಹೇಳಿಕೆಗಳು ಮಹತ್ವ ಪಡೆದುಕೊಂಡಿದೆ.
ಭಾರತ, ಚೀನಾ ಮತ್ತು ಟರ್ಕಿ ರಷ್ಯಾದ ತೈಲದ ಮೂರು ದೊಡ್ಡ ಆಮದುದಾರರು, ಮತ್ತು ರಷ್ಯಾ-ಉಕ್ರೇನ್ ಯುದ್ಧ ಶುಕ್ರವಾರದೊಳಗೆ ಕೊನೆಗೊಳ್ಳದಿದ್ದರೆ "ದ್ವಿತೀಯ ಸುಂಕ"ಗಳನ್ನು ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಈ ವರ್ಷದ ಆರಂಭದಲ್ಲಿ, ಚೀನಾ ಮತ್ತು ಅಮೆರಿಕ ಸುಂಕ ಯುದ್ಧದಲ್ಲಿ ತೊಡಗಿದ್ದವು, ರಷ್ಯಾ-ಉಕ್ರೇನ್ ಯುದ್ಧ ಶೇಕಡಾ 145 ರಷ್ಟು ಹೆಚ್ಚಿತ್ತು. ಆದಾಗ್ಯೂ, ಚೀನಾ ಸುಂಕವನ್ನು ಶೇ. 125 ಕ್ಕೆ ಮಿತಿಗೊಳಿಸಿತ್ತು, "ಯುಎಸ್ ಇನ್ನೂ ಹೆಚ್ಚಿನ ಮಟ್ಟಕ್ಕೆ ಸುಂಕವನ್ನು ಹೆಚ್ಚಿಸಿದರೂ, ಅದು ಆರ್ಥಿಕವಾಗಿ ಅರ್ಥಹೀನವಾಗಿರುತ್ತದೆ ಮತ್ತು ಅಂತಿಮವಾಗಿ ಜಾಗತಿಕ ಆರ್ಥಿಕತೆಯ ಇತಿಹಾಸದಲ್ಲಿ ನಗೆಪಾಟಲಿಗೆ ಈಡಾಗುತ್ತದೆ" ಎಂದು ಚೀನಾ ಹೇಳಿತ್ತು.
ವ್ಯಾಪಾರ ಒಪ್ಪಂದವನ್ನು ರೂಪಿಸಲು ಈ ವರ್ಷದ ಕೊನೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡುವ ಯೋಜನೆಯನ್ನು ಟ್ರಂಪ್ ಪ್ರಕಟಿಸಿದರು.
ಭಾರತದ ಮೇಲೆ ರಷ್ಯಾದ ತೈಲ ಆಮದುಗಳ ಮೇಲೆ ದಂಡನಾತ್ಮಕ ಸುಂಕ ವಿಧಿಸುವ ಬೆದರಿಕೆಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್ಚಿಸುತ್ತಿದ್ದಂತೆ, ಚೀನಾ ಈ ಬಾರಿ ನವದೆಹಲಿಯನ್ನು ಬೆಂಬಲಿಸಲು ಮಾತುಕತೆಗೆ ಇಳಿದಿದೆ. ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯ ವಕ್ತಾರರು "ದಿ ಹಿಂದೂ ಪತ್ರಿಕೆಯ ಸಂಪಾದಕೀಯವನ್ನು ಸಾರ್ವಜನಿಕವಾಗಿ ಅನುಮೋದಿಸಿದ್ದಾರೆ, ಅದು ಅಮೆರಿಕ ಮತ್ತು ಯುರೋಪಿಯನ್ ಒತ್ತಡವನ್ನು ತೀವ್ರವಾಗಿ ಟೀಕಿಸಿತು, "ಭಾರತದ ಸಾರ್ವಭೌಮತ್ವವು ಮಾತುಕತೆಗೆ ಒಳಪಡುವುದಿಲ್ಲ" ಎಂದು ಒತ್ತಿ ಹೇಳಿದರು.