ಉತ್ತರಕಾಶಿ: ಈ ವಾರದ ಆರಂಭದಲ್ಲಿ ಉತ್ತರಾಖಂಡ ರಾಜ್ಯದ ಉತ್ತರಕಾಶಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹ ಮತ್ತು ಭೂಕುಸಿತಗಳಲ್ಲಿ ಹಲವಾರು ಜೀವಗಳು ಬಲಿಯಾಗಿ, ಅಪಾರ ಹಾನಿ ಸಂಭವಿಸಿದ ನಂತರ ಅಲ್ಲಿ ಸಿಲುಕಿಕೊಂಡಿರುವ ಜನರನ್ನು ವಿಮಾನದ ಮೂಲಕ ಸಾಗಿಸಲು ನಾಲ್ಕು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಮಂಗಳವಾರ ಸಂಭವಿಸಿದ ಭೂ ಕುಸಿತ ಮತ್ತು ಹಠಾತ್ ಪ್ರವಾಹದ ನಂತರ ಸಂಪರ್ಕ ಕಡಿತಗೊಂಡಿರುವ ವಿಪತ್ತು ಪೀಡಿತ ಧರಾಲಿ ಪ್ರದೇಶದ ಕೆಲವು ಭಾಗಗಳಿಂದ 729 ಜನರನ್ನು ಸ್ಥಳಾಂತರಿಸಲಾಗಿದೆ.
ವಿಪತ್ತಿನಲ್ಲಿ ಐವರು ಮೃತಪಟ್ಟಿದ್ದು 49 ಜನರು ಕಾಣೆಯಾಗಿದ್ದಾರೆ ಎಂದು ಜಿಲ್ಲಾಡಳಿತ ದೃಢಪಡಿಸಿದೆ. ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಆಶ್ರಯ ಪಡೆದಿರುವ ಜನರನ್ನು ರಕ್ಷಿಸಲು ಉತ್ತರಾಖಂಡ ನಾಗರಿಕ ವಿಮಾನಯಾನ ಪ್ರಾಧಿಕಾರದ ನಾಲ್ಕು ಹೆಲಿಕಾಪ್ಟರ್‌ಗಳು ಇಂದು ಐದನೇ ದಿನದಂದು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.
ಪರಿಹಾರ ಶಿಬಿರಕ್ಕೆ ಜನರೇಟರ್ ನ್ನು ಸಾಗಿಸುವ ಚಿನೂಕ್ ಹೆಲಿಕಾಪ್ಟರ್ ಇಂದು ಬೆಳಗ್ಗೆ ಜಾಲಿಗ್ರಾಂಟ್ ವಿಮಾನ ನಿಲ್ದಾಣದಿಂದ ಹೊರಟಿತು. ಧರಾಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಹಠಾತ್ ಪ್ರವಾಹದಿಂದ ವ್ಯತ್ಯಯವುಂಟಾಯಿತು.
ಪ್ರವಾಹ ಪೀಡಿತ ಪ್ರದೇಶಗಳಿಗೆ ರಸ್ತೆ ಸಂಪರ್ಕವನ್ನು ಸುಧಾರಿಸಲು ಗಂಗ್ನಾನಿ ಬಳಿಯ ಲಿಮ್ಚಿಗಡ್‌ನಲ್ಲಿ ಬೈಲಿ ಸೇತುವೆಯನ್ನು ಯುದ್ಧೋಪಾದಿಯಲ್ಲಿ ನಿರ್ಮಿಸಲಾಗುತ್ತಿದೆ. ಇದರ ನಿರ್ಮಾಣ ಕಾರ್ಯವು ರಾತ್ರಿಯಿಡೀ ನಡೆದಿದ್ದು, ಮುಂದಿನ 24 ಗಂಟೆಗಳಲ್ಲಿ ಅದು ಸಿದ್ಧವಾಗಲಿದೆ.
ಧಾರಾಲಿಯಲ್ಲಿ ಹಠಾತ್ ಪ್ರವಾಹದಿಂದ ಹಾನಿಗೊಳಗಾದ ಸ್ಥಳದಲ್ಲಿ ಬಿದ್ದಿರುವ ಟನ್‌ಗಟ್ಟಲೆ ಅವಶೇಷಗಳ ಮೂಲಕ ಕಾಣೆಯಾದವರನ್ನು ಹುಡುಕಲು ಅಗತ್ಯವಾದ ಸುಧಾರಿತ ಉಪಕರಣಗಳನ್ನು ಸಾಗಿಸುವ ಪ್ರಯತ್ನಗಳಿಗೆ ಗಂಗೋತ್ರಿ ಹೆದ್ದಾರಿಯಲ್ಲಿ ಹಲವಾರು ಹಂತಗಳಲ್ಲಿ ಅಡಚಣೆ ಉಂಟಾಗಿದ್ದು, ಹಲವು ಕಡೆ ಬಿರುಕು ಮೂಡಿದೆ.