ನವದೆಹಲಿ: ಅಮೆರಿಕ ಜೊತೆಗಿನ ವ್ಯಾಪಾರ ಮಾತುಕತೆಗಳ ಭವಿಷ್ಯದ ಬಗ್ಗೆ ಹೆಚ್ಚುತ್ತಿರುವ ಅನಿಶ್ಚಿತತೆಯ ನಡುವೆ, ಈ ತಿಂಗಳ ಕೊನೆಯ ವಾರದಲ್ಲಿ ಅಮೆರಿಕ ನಿಯೋಗದ ಭೇಟಿ ನಿಗದಿಯಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ(The New Indian Expess)ಗೆ ಮಾಹಿತಿ ಲಭ್ಯವಾಗಿದೆ.
ಆಗಸ್ಟ್ 24 ರಂದು ನಿಗದಿಯಾಗಿರುವಂತೆ ಭಾರತಕ್ಕೆ ಅಮೆರಿಕ ನಿಯೋಗದ ಭೇಟಿಯ ಯೋಜನೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ವಾಣಿಜ್ಯ ಸಚಿವಾಲಯದ ಇಬ್ಬರು ವ್ಯಕ್ತಿಗಳು ದೃಢಪಡಿಸಿದ್ದಾರೆ.
ಭಾರತದ ಆಮದು ವಸ್ತುಗಳ ಮೇಲೆ ಸುಂಕ ಹೇರಿಕೆ ಸಮಸ್ಯೆ ಬಗೆಹರಿಯುವವರೆಗೆ ಭಾರತದೊಂದಿಗೆ ಮಾತುಕತೆ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ನಿರಾಕರಿಸಿದ ನಂತರ ವ್ಯಾಪಾರ ಮಾತುಕತೆಗಳ ಭವಿಷ್ಯದ ಬಗ್ಗೆ ಊಹಾಪೋಹಗಳಿದ್ದವು.
ಮಾತುಕತೆ ರದ್ದತಿ ಬಗ್ಗೆ ಅಮೆರಿಕದಿಂದ ಇದುವರೆಗೆ ಯಾವುದೇ ಸಂವಹನ ನಡೆದಿಲ್ಲ. ಅವರ ಭೇಟಿ ಆಗಸ್ಟ್ 24 ರಂದು ನಿಗದಿಯಾಗಿದೆ. ಆಗಸ್ಟ್ ಮೂರನೇ ವಾರದಲ್ಲಿ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂದಿನ ಸುತ್ತಿನ ಮಾತುಕತೆಗಳು ಆಗಸ್ಟ್ 25 ರಂದು ದೆಹಲಿಯಲ್ಲಿ ನಡೆಯಲಿವೆ.
ಈ ವರದಿಯನ್ನು ಸಲ್ಲಿಸುವವರೆಗೆ ಯುಎಸ್ ವ್ಯಾಪಾರ ಪ್ರತಿನಿಧಿಗೆ ಕಳುಹಿಸಲಾದ ಪ್ರಶ್ನೆಗೆ ಉತ್ತರಿಸಲಾಗಿಲ್ಲ. ಸರ್ಕಾರವು ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಿಗೆ, ಅಮೆರಿಕ ಜೊತೆಗಿನ ಮಾತುಕತೆಗಳಲ್ಲಿ ಮಿತಿಯನ್ನು ಹಾಕಿದ್ದು ಅದನ್ನು ಮೀರಿ ಹೋಗದ ಸ್ಥಿತಿ ಭಾರತ ಹೊಂದಿದೆ ಎಂದು ತಿಳಿಸಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬರ್ತ್ವಾಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಮಿತಿಗೆ ವಿವರಿಸಿದರು.
ರಫ್ತು ವೈವಿಧ್ಯೀಕರಣದ ಮೂಲಕ ಆರ್ಥಿಕ ಹೊಡೆತವನ್ನು ತಗ್ಗಿಸುವ ತಂತ್ರವನ್ನು ವಿವರಿಸುವಾಗ, ಪ್ರಮುಖ ವಲಯಗಳಾದ ವಿಶೇಷವಾಗಿ ಕೃಷಿ ಮತ್ತು ಡೈರಿ ಉತ್ಪನ್ನ ಕುರಿತು ಸರ್ಕಾರ ತನ್ನ ನಿಲುವನ್ನು ಪ್ರತಿಪಾದಿಸಿದೆ ಎಂದು ಮೂಲಗಳು ತಿಳಿಸಿವೆ.