ನವದೆಹಲಿ: ನಕಲಿ ಮತಗಳು ಹೇಗೆ ಚಲಾವಣೆಯಾಗುತ್ತಿವೆ ಎಂಬುದನ್ನು ಚಿತ್ರಿಸುವ ಹೊಸ ವೀಡಿಯೊವನ್ನು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಬುಧವಾರ ತನ್ನ 'ವೋಟ್ ಚೋರಿ' ಅಥವಾ ಮತಕಳ್ಳತನ ವಿರುದ್ಧ ಅಭಿಯಾನವನ್ನು ಚುರುಕುಗೊಳಿಸಿದೆ. ಜನರು ಧ್ವನಿ ಎತ್ತುವಂತೆ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು "ಬಿಜೆಪಿಯ ಹಿಡಿತದಿಂದ" ರಕ್ಷಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಳಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಒಂದು ನಿಮಿಷದ ವೀಡಿಯೊವನ್ನು ಹಂಚಿಕೊಂಡು "ಆಪ್ಕೆ ವೋಟ್ ಕಿ ಚೋರಿ ಆಪ್ಕೆ ಅಧಿಕಾರ್ ಕಿ ಚೋರಿ, ಆಪ್ಕಿ ಪೆಹಚಾನ್ ಕಿ ಚೋರಿ ಹೈ"(ನಿಮ್ಮ ಮತ ಕಳ್ಳತನ ಎಂದರೆ ನಿಮ್ಮ ಹಕ್ಕುಗಳ ಕಳ್ಳತನ, ನಿಮ್ಮ ಗುರುತಿನ ಕಳ್ಳತನ).ಎಂದು ಹೇಳಿದ್ದಾರೆ.
'ಬೂತ್ ಪರ್ ವೋಟ್ ಚೋರಿ' ಎಂಬ ಜಾಹೀರಾತನ್ನು ಟ್ಯಾಗ್ ಮಾಡಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ, "ನಿಮ್ಮ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಿಡಬೇಡಿ. ಈ ಬಾರಿ ಪ್ರಶ್ನೆಗಳನ್ನು ಕೇಳಿ, ಉತ್ತರಗಳನ್ನು ಬೇಡಿಕೊಳ್ಳಿ! ವೋಟ್ ಚೋರಿ ವಿರುದ್ಧ ನಿಮ್ಮ ಧ್ವನಿ ಎತ್ತಿ" ಎಂದು ಕೇಳಿಕೊಂಡಿದ್ದಾರೆ.
ಬಿಜೆಪಿಯ ಹಿಡಿತದಿಂದ ಸಾಂವಿಧಾನಿಕ ಸಂಸ್ಥೆಗಳನ್ನು ಮುಕ್ತಗೊಳಿಸಿ" ಎಂದು ಅವರು ಎಕ್ಸ್ ಖಾತೆಯಲ್ಲಿ ಜನತೆಗೆ ಸಂದೇಶ ನೀಡಿದ್ದಾರೆ.
ಕಾಂಗ್ರೆಸ್ ಮಾಡಿದ ವೀಡಿಯೊದಲ್ಲಿ ಒಂದು ಕುಟುಂಬವು ಮತಗಟ್ಟೆಗೆ ಪ್ರವೇಶಿಸುತ್ತಿರುವುದನ್ನು ತೋರಿಸಲಾಗಿದೆ. ಇಬ್ಬರು ಜನರು ತಮ್ಮ ಮತಗಳನ್ನು ಈಗಾಗಲೇ ಚಲಾಯಿಸಲಾಗಿದೆ ಎಂದು ಹೇಳುತ್ತಿದ್ದಾರೆ. ನಕಲಿ ಮತಗಳನ್ನು ಚಲಾಯಿಸುವ ಇಬ್ಬರು ವ್ಯಕ್ತಿಗಳು 'ಚುನಾವಣಾ ಚೋರಿ ಆಯೋಗ್' ಪ್ರದರ್ಶನ ಫಲಕವನ್ನು ಮೇಜಿನ ಮೇಲೆ ಇಟ್ಟುಕೊಂಡು ಮೇಜಿನ ಬಳಿ ಕುಳಿತಿದ್ದ ಅಧಿಕಾರಿಗೆ ಹೆಬ್ಬೆರಳುಗಳನ್ನು ತೋರಿಸುವುದರೊಂದಿಗೆ ಕೊನೆಯಾಗುತ್ತದೆ.
ಮತ ಕಳ್ಳತನ ವಿದ್ಯಮಾನ ತನಗೆ "ಮಾಡು ಇಲ್ಲವೇ ಮಡಿ" ಸಮಸ್ಯೆಯಾಗಿದೆ. ಹೀಗಾಗಿ ನಾಳೆ ಸಂಜೆ 'ಲೋಕತಂತ್ರ ಬಚಾವೋ ಮಶಾಲ್ ಮೆರವಣಿಗೆಗಳು' ಸೇರಿದಂತೆ ವಿವಿಧ ಚಟುವಟಿಕೆಗಳ ಮೂಲಕ ತನ್ನ ಆರೋಪಗಳನ್ನು ಜನರಿಗೆ ತಲುಪಿಸಲು ಮಾರ್ಗಸೂಚಿಯನ್ನು ಘೋಷಿಸಿತು. ಮತ ಕಳ್ಳತನದ ಹೆಚ್ಚಿನ ಪುರಾವೆಗಳು ಮುನ್ನೆಲೆಗೆ ಬರುತ್ತಿದ್ದಂತೆ, ಅದು ಕೇವಲ ಕಳ್ಳತನವಲ್ಲ, ದರೋಡೆ ಎಂದು ತೋರುತ್ತದೆ ಎಂದು ವಿರೋಧ ಪಕ್ಷವು ಹೇಳಿಕೊಂಡಿದೆ.
ನಾಳೆ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ 'ಲೋಕತಂತ್ರ ಬಚಾವೋ ಮಶಾಲ್ ಮೆರವಣಿಗೆ' ನಡೆಯಲಿದೆ, ಆಗಸ್ಟ್ 22 ಮತ್ತು ಸೆಪ್ಟೆಂಬರ್ 7 ರ ನಡುವೆ, ಎಲ್ಲಾ ರಾಜ್ಯ ಕೇಂದ್ರ ಕಚೇರಿಗಳಲ್ಲಿ ಕಾಂಗ್ರೆಸ್ "ವೋಟ್ ಚೋರ್, ಗಡ್ಡಿ ಛೋರ್ಹ್ (ಮತ ಕಳ್ಳರು, ಅಧಿಕಾರ ತ್ಯಜಿಸಿ)" ರ್ಯಾಲಿಗಳನ್ನು ನಡೆಸಲಿದೆ.
ಸೆಪ್ಟೆಂಬರ್ 15 ಮತ್ತು ಅಕ್ಟೋಬರ್ 15 ರ ನಡುವೆ, ಮತದಾನದ ಹಕ್ಕನ್ನು ಉಳಿಸಲು ಮತ್ತು ಜನರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಸಹಿ ಅಭಿಯಾನವನ್ನು ನಡೆಸಲಾಗುವುದು. "ವೋಟ್ ಚೋರಿ" ಎಂದು ಕರೆಯುವ ಮತಗಟ್ಟೆಯಿಂದ ನೋಂದಣಿ ಮಾಡಿಕೊಳ್ಳಲು ಮತ್ತು ಹೊಣೆಗಾರಿಕೆಯನ್ನು ಕೋರಲು ಮತ್ತು ಡಿಜಿಟಲ್ ಮತದಾರರ ಪಟ್ಟಿಗಳ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಲು ಕಾಂಗ್ರೆಸ್ ಒಂದು ವೆಬ್ ಪೋರ್ಟಲ್ ನ್ನು ಸಹ ಪ್ರಾರಂಭಿಸಿದೆ.
votechori.in/ecdemand ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಈ ಬೇಡಿಕೆಯನ್ನು ಬೆಂಬಲಿಸುವಂತೆ ರಾಹುಲ್ ಗಾಂಧಿ ಜನರನ್ನು ಒತ್ತಾಯಿಸಿದ್ದರು. ಯಾರಾದರೂ ಪೋರ್ಟಲ್ ಲಿಂಕ್ ನ್ನು ಕ್ಲಿಕ್ ಮಾಡಿ "ವೋಟ್ ಚೋರಿ ಪ್ರೂಫ್, ಡಿಮ್ಯಾಂಡ್ ಇಸಿ ಅಕೌಂಟಬಿಲಿಟಿ ಮತ್ತು ರಿಪೋರ್ಟ್ ವೋಟ್ ಚೋರಿ" ನ್ನು ಡೌನ್‌ಲೋಡ್ ಮಾಡಬಹುದು ಎಂದು ಕಾಂಗ್ರೆಸ್ ನಾಯಕ ಮತ್ತು ಎಐಸಿಸಿ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಉಸ್ತುವಾರಿ ಕನ್ಹಯ್ಯಾ ಕುಮಾರ್ ತಿಳಿಸಿದ್ದಾರೆ.