ಪಾಟ್ನಾ: "ಚುನಾವಣಾ ಆಯೋಗ ನನ್ನನ್ನು ಅಜ್ಜಿಯನ್ನಾಗಿ ಮಾಡಿದೆ" ಎಂದು ಮಿಂಟಾ ದೇವಿ ತಮ್ಮ ಹೇಳಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ವಿರೋಧ ಪಕ್ಷದ ಸಂಸದರು ರಾಷ್ಟ್ರ ರಾಜಧಾನಿಯಲ್ಲಿ ಮಿಂಟಾ ದೇವಿ ಫೋಟೋ ಇರುವ ಟಿ- ಶರ್ಟ್‌ಗಳನ್ನು ಧರಿಸಿ ಪ್ರತಿಭಟನೆ ನಡೆಸಿದ್ದರು. ನಂತರ ಮಿಂಟಾ ದೇವಿ ಹೆಸರು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ.
"ಈ ಅವಿವೇಕಕ್ಕೆ ನನ್ನನ್ನು ದೂಷಿಸಲು ಹೇಗೆ ಸಾಧ್ಯ? ಬೂತ್ ಮಟ್ಟದ ಅಧಿಕಾರಿಯ ಭೇಟಿ ಮಾಡಲು ಕಾಯುತ್ತಿದ್ದೆ. ಆದರೆ ಅವರು ಸಿಗಲಿಲ್ಲ. ಹೀಗಾಗಿ ನಾನು ನನ್ನ ವೋಟರ್ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ್ದೇನೆ" ಎಂದು 35 ವರ್ಷದ ಮಿಂಟಾ ದೇವಿ ಹೇಳಿದ್ದಾರೆ.
"ಹೇಗೋ ನನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇದೆ. ಕೊನೆಗೂ 35ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲು ಅವಕಾಶ ಸಿಗಬಹುದು ಎಂದು ನನಗೆ ತುಂಬಾ ಸಂತೋಷವಾಗಿತ್ತು. ನಾನು ಅರ್ಹತೆ ಪಡೆದ ನಂತರ ಅನೇಕ ಸಮೀಕ್ಷೆಗಳು ನಡೆದಿವೆ. ಆದರೆ ಚುನಾವಣಾ ಆಯೋಗವು ನನ್ನನ್ನು ಅಜ್ಜಿಯನ್ನಾಗಿ ಮಾಡಿದ್ದರೆ ಬಗ್ಗೆ ನನಗೆ ಗೊತ್ತೆ ಇಲ್ಲ. ನನ್ನ ಜನ್ಮ ವರ್ಷ 1990 ಎಂದು ನಾನು ನಮೂದಿಸಿದ್ದೆ, ಅದು ನನ್ನ ಆಧಾರ್ ಕಾರ್ಡ್‌ನಲ್ಲಿರುವಂತೆಯೇ ಇತ್ತು. ಕರಡು ಪಟ್ಟಿಯಲ್ಲಿ 1990 ಅನ್ನು 1900 ಎಂದು ಮಾಡಿದ್ದರೆ ನಾನು ಏನೂ ಮಾಡಲು ಸಾಧ್ಯವಿಲ್ಲ" ಎಂದು ಮಿಂಟಾ ದೇವಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆದಾಗ್ಯೂ, ಸಿವಾನ್ ಜಿಲ್ಲಾಡಳಿತವು, ದರೌಂಡಾ ವಿಧಾನಸಭಾ ಕ್ಷೇತ್ರದ ಈ ಸಂಭಾವ್ಯ ಮತದಾರರನ್ನು ಸಂಪರ್ಕಿಸಲಾಗಿದೆ ಮತ್ತು ಈ ಕುರಿತು ಸುದ್ದಿಯಾಗುವ ಮೊದಲೇ ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೊಂಡಿದೆ.
ಸಿವಾನ್ ಜಿಲ್ಲಾಧಿಕಾರಿ ಹೊರಡಿಸಿದ ಹೇಳಿಕೆಯ ಪ್ರಕಾರ, "ದೋಷವನ್ನು ಸರಿಪಡಿಸಲು ಆಗಸ್ಟ್ 10 ರಂದು ಮಿಂಟಾ ದೇವಿ ಅವರಿಂದ ಅರ್ಜಿ ಪಡೆಯಲಾಗಿದೆ. ಅದನ್ನು ಬಿಎಲ್‌ಒ ಅವರ ಗಮನಕ್ಕೆ ತಂದಿದ್ದು, ಆಕ್ಷೇಪಣೆಗಳ ಪರಿಶೀಲನೆಯ ಹಂತದಲ್ಲಿ ಇದನ್ನು ಪರಿಗಣಿಸಲಾಗುವುದು" ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಸಮಯದಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.