ನವದೆಹಲಿ: ಪಾಕಿಸ್ತಾನದ ಪ್ರಧಾನಿ ಶೆಹಭಾಜ್ ಶರೀಫ್ ಸೇರಿದಂತೆ ಅತ್ಯುನ್ನತ ನಾಯಕರು ಪದೇ ಪದೇ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವಂತೆಯೇ ಭಾರತ ಗುರುವಾರ ಖಡಕ್ ವಾರ್ನಿಂಗ್ ನೀಡಿದೆ. ನೀರು ಅಥವಾ ಭದ್ರತೆ ವಿಚಾರದಲ್ಲಿ ಯಾವುದೇ ದುಸ್ಸಾಹಸಕ್ಕೆ ಮುಂದಾದ್ರೆ 'ಪರಿಣಾಮ ನೆಟ್ಟಗಿರಲ್ಲ. ನೋವಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿ ನೀಡಿದೆ.
ಪಾಕಿಸ್ತಾನದಿಂದ ನಿರಂತರ 'ಅಜಾಗರೂಕ, ಯುದ್ಧ ಪ್ರೇರಿತ ಹಾಗೂ ದ್ವೇಷಪೂರಿತ ಹೇಳಿಕೆಯನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಂಡಿಸಿದೆ. ಇಂತಹ ಹೇಳಿಕೆಗಳು ಭಾರತ ವಿರೋಧಿ ಭಾವನೆ ಹುಟ್ಟುಹಾಕಲು ಮತ್ತು ಆಂತರಿಕ ವೈಫಲ್ಯಗಳಿಂದ ದೂರವಿರುವ ಪಾಕಿಸ್ತಾನದ ಪ್ರಸಿದ್ಧ 'ಸಿದ್ಧ ತಂತ್ರ'ವಾಗಿದೆ ಎಂದು ಹೇಳಿದೆ.
ಇತ್ತೀಚೆಗೆ ತೋರಿಸಿದಂತೆ ಯಾವುದೇ ರೀತಿಯ ದುಸ್ಸಾಹಸಕ್ಕೆ ಮುಂದಾದ್ರೆ ತೀವ್ರ ನೋವಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಪಾಕಿಸ್ತಾನ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಾಕಿಸ್ತಾನದಿಂದ ಒಂದು ಹನಿ ನೀರನ್ನು ಕೊಡಲು ಭಾರತಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಹೇಳಿಕೆಗೆ ಭಾರತ ಇದೀಗ ಪ್ರತಿಕ್ರಿಯಿಸಿದೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಒಂದು ದಿನದ ನಂತರ ಏಪ್ರಿಲ್ 23 ರಂದು ಭಾರತ 1960 ರ ಸಿಂಧು ಜಲ ಒಪ್ಪಂದ (IWT) ಅಮಾನತು ನಿರ್ಧಾರವನ್ನು ತೆಗೆದುಕೊಂಡಿತ್ತು. ಈ ನಿರ್ಧಾರದ ಹಿನ್ನೆಲೆಯಲ್ಲಿ ಮಾತನಾಡಿದ ಶರೀಫ್, ನಮ್ಮ ನೀರನ್ನು ಹಿಡಿದಿಟ್ಟುಕೊಳ್ಳುವುದಾಗಿ ಬೆದರಿಕೆ ಹಾಕಿದರೆ, ನೀವು ಪಾಕಿಸ್ತಾನದ ಒಂದು ಹನಿಯನ್ನೂ ಪಡೆಯಲು ಸಾಧ್ಯವಾಗುವುದಿಲ್ಲ. ಭಾರತಕ್ಕೆ ತಕ್ಕ ಪಾಠ ಕಲಿಸಲಾಗುವುದು" ಎಂದು ಎಚ್ಚರಿಸಿದ್ದರು.
ಇದೇ ನಿಲುವನ್ನು ಬೆಂಬಲಿಸಿ ಮಾತನಾಡಿದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ, ಸಿಂಧು ಜಲ ಒಪ್ಪಂದ (IWT) ಅಮಾನತನ್ನು "ಸಿಂಧೂ ಕಣಿವೆ ನಾಗರಿಕತೆಯ ಮೇಲಿನ ದಾಳಿಗೆ" ಹೋಲಿಸಿದ್ದು, ಯುದ್ಧಕ್ಕೆ ಒತ್ತಾಯಿಸಿದರೆ, ಪಾಕಿಸ್ತಾನವು ಹಿಂದೆ ಸರಿಯುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಈ ಮಧ್ಯೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್, ಅಮೆರಿಕಕ್ಕೆ ಭೇಟಿ ನೀಡಿದಾಗ, ಸಿಂಧೂ ನದಿ ನೀರಿನ ಹರಿವನ್ನು ತೆಡಯಲು ಭಾರತ ನಿರ್ಮಿಸಬಹುದಾದ "ಯಾವುದೇ ಅಣೆಕಟ್ಟನ್ನು ನಾಶಮಾಡಲಾಗುವುದು, ಸಿಂಧೂ ನದಿಯು ಭಾರತೀಯರ ಕುಟುಂಬದ ಆಸ್ತಿಯಲ್ಲ ಎಂದು ಹೇಳಿದ್ದರು.
ಮುನೀರ್ ಅವರ ಟೀಕೆಗಳನ್ನು ಭಾರತ ಬಲವಾಗಿ ಖಂಡಿಸಿದ್ದು, ಇಂತಹ ಬೆದರಿಕೆಗಳು ತನ್ನ ಭದ್ರತೆ ಕಾಪಾಡುವುದರಿಂದ ಭಾರತವನ್ನು ತಡೆಯಲು ಸಾಧ್ಯವಿಲ್ಲ ಎಂದು MEA ಹೇಳಿದೆ. ಅಮೆರಿಕದಿಂದ ಈ ಟೀಕೆ ಮಾಡಿರುವುದಕ್ಕೆ ವಿಷಾದಿಸಿದೆ.
ಸಿಂಧು ನದಿ ಜಲ ಒಪ್ಪಂದ ಕುರಿತ ಮಧ್ಯಸ್ಥಿಕೆ ನ್ಯಾಯಾಲಯದ ಇತ್ತೀಚಿನ ತೀರ್ಪನ್ನು ತಿರಸ್ಕರಿಸಿದ ಭಾರತ, ತನ್ನ ದೀರ್ಘಕಾಲದ ನಿಲುವನ್ನು ಪುನರುಚ್ಚರಿಸಿತ್ತು. ಮಧ್ಯಸ್ಥಿಕೆ ನ್ಯಾಯಾಲದ ಕಾನೂನುಬದ್ಧತೆ, ನ್ಯಾಯಸಮ್ಮತತೆ ಅಥವಾ ಸಾಮರ್ಥ್ಯವನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ. ಹೀಗಾಗಿ ಅದರ ಘೋಷಣೆಗಳು ನ್ಯಾಯವ್ಯಾಪ್ತಿಯಿಲ್ಲ. ಕಾನೂನು ಮಾನ್ಯತೆ ಇಲ್ಲ ಮತ್ತು ನೀರಿನ ಬಳಕೆಯ ಭಾರತದ ಹಕ್ಕುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು MEA ಹೇಳಿದೆ.