ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚಶೋತಿ ಪ್ರದೇಶದಲ್ಲಿ ಗುರುವಾರ ಸಂಭವಿಸಿದ ಭಾರಿ ಮೇಘಸ್ಫೋಟದಿಂದ ಉಂಟಾದ ಪ್ರವಾಹದಲ್ಲಿ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ.
ಮಚೈಲ್ ಮಾತಾ ಯಾತ್ರೆಯ ಮಾರ್ಗದಲ್ಲಿ ಈ ವಿಪತ್ತು ಸಂಭವಿಸಿದೆ, ಅಲ್ಲಿ ಯಾತ್ರಾರ್ಥಿಗಳ ಭಾರೀ ದಟ್ಟಣೆ ಮತ್ತು ನಿರಂತರ ಮಳೆ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಟ್ಟಿದೆ. ಮೇಘಸ್ಫೋಟ ಸಂಭವಿಸಿದಾಗ ದುರಂತದ ಸ್ಥಳದಲ್ಲಿ 250 ಕ್ಕೂ ಹೆಚ್ಚು ಜನರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ತಂಡಗಳು ಸ್ಥಳದಲ್ಲಿ ದಣಿವರಿಯಿಲ್ಲದೆ ಕೆಲಸ ಮಾಡುತ್ತಿವೆ. ಇಲ್ಲಿಯವರೆಗೆ, 100 ರಿಂದ 150 ಜನರು ಗಾಯಗೊಂಡಿದ್ದಾರೆ ಮತ್ತು ಸಿಲುಕಿಕೊಂಡಿರುವವರನ್ನು ಸ್ಥಳಾಂತರಿಸಲು ಮತ್ತು ವೈದ್ಯಕೀಯ ನೆರವು ನೀಡಲು ನಾವು ಸಾಧ್ಯವಿರುವ ಕೆಲಸ ಮಾಡುತ್ತಿದ್ದೇವೆ ಎಂದು ಕಿಶ್ತ್ವಾರ್ ಡಿಡಿಸಿ ಅಧ್ಯಕ್ಷೆ ಪೂಜಾ ಠಾಕೂರ್ ಟಿಎನ್‌ಐಇಗೆ ತಿಳಿಸಿದ್ದಾರೆ.
ದಿಢೀರ್ ಪ್ರವಾಹ ಉಂಟಾದ ಕಾರಣ ಸಿಆರ್‌ಪಿಎಫ್ ಶಿಬಿರದ ಪಾರ್ಕಿಂಗ್ ಸ್ಥಳ, ಲಂಗರ್ (ಸಮುದಾಯ ಅಡುಗೆಮನೆ) ಪ್ರದೇಶವನ್ನು ಆವರಿಸಿದ್ದು, ಹಲವಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.
ಮೇಘಸ್ಫೋಟದಿಂದ ಉಂಟಾದ ಪ್ರವಾಹದಿಂದಾಗಿ ಗ್ರಾಮದ ರಸ್ತೆಗಳು ಕೊಚ್ಚಿ ಹೋಗಿದ್ದು, ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯುಂಟಾಗಿದೆ. ತೀವ್ರವಾಗಿ ಗಾಯಗೊಂಡಿರುವ ಯಾತ್ರಾರ್ಥಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿ ರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ವಿಪತ್ತು ಪ್ರತಿಕ್ರಿಯೆ ತಂಡ (ಎಸ್‌ಡಿಆರ್‌ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಹಾಗೂ ಸೇನಾ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ಯಲ್ಲಿ ತೊಡಗಿದ್ದಾರೆ. ಸೇನೆಯು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಕೈಜೋಡಿಸಿದೆ ಎಂದು ಜಮ್ಮು ಮೂಲದ ಸೇನಾ ವಕ್ತಾರರು ತಿಳಿಸಿದ್ದಾರೆ, ಕಾಣೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಮೇಘ ಸ್ಫೋಟದಿಂದಾಗಿ ಮಚೈಲ್ ಮಾತಾ ವಾರ್ಷಿಕ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಚಸೋತಿ ಗ್ರಾಮವು ಮಚೈಲ್ ಮಾತಾ ದೇವಸ್ಥಾನಕ್ಕೆ ತೆರಳಲು ವಾಹನ ಸಂಚಾರಕ್ಕೆ ಯೋಗ್ಯವಾಗಿದ್ದ ಒಂದೇ ಒಂದು ಮಾರ್ಗವಾಗಿತ್ತು. ಇದೀಗ ಮೇಘಸ್ಫೋಟದಿಂದಾಗಿ ಕೆಸರು, ಕಲ್ಲು, ಮಣ್ಣುಗಳಿಂದ ಗ್ರಾಮದ ಬಹುತೇಕ ಭಾಗ ಆವೃತವಾಗಿದೆ. ಈ ಕಾರಣ ಯಾತ್ರೆ ಸ್ಥಗಿತಗೊಳಿಸಲಾಗಿದೆ.