ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಜೋಡ್ ಘಾಟಿ ಎಂಬ ಗ್ರಾಮದಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟದಲ್ಲಿ ಕನಿಷ್ಟ 7 ಮಂದಿ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ರಾತ್ರಿಯಿಡೀ ಭಾರೀ ಮಳೆಯಾಗಿದ್ದು, ಇಂದು ಬೆಳಗಿನ ಜಾವ ಮೇಘಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಪರಿಣಾಮ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿ ರಾಜ್‌ಬಾಗ್ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,
ಇದೀಗ ಪೊಲೀಸ್ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಜಂಟಿ ತಂಡವು ಸ್ಥಳೀಯ ಸ್ವಯಂಸೇವಕರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.
ಇಲ್ಲಿಯವರೆಗೆ ನಾಲ್ಕು ಶವಗಳನ್ನು ಹೊರತೆಗೆಯಲಾಗಿದ್ದು, ಆರು ಮಂದಿ ಗಾಯಗೊಂಡವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ ಕಥುವಾ ಪೊಲೀಸ್ ಠಾಣೆ ವ್ಯಾಪ್ತಿಯ ಬಗಾರ್ಡ್ ಮತ್ತು ಚಾಂಗ್ಡಾ ಗ್ರಾಮಗಳಲ್ಲಿ ಹಾಗೂ ಲಖನ್‌ಪುರದ ದಿಲ್ವಾನ್-ಹುಟ್ಲಿ ಪ್ರದೇಶದಲ್ಲಿ ಭೂಕುಸಿತಗಳು ವರದಿಯಾಗಿವೆ. ಆದಾಗ್ಯೂ, ಈ ಪ್ರದೇಶಗಳಿಂದ ಯಾವುದೇ ದೊಡ್ಡ ಹಾನಿ ವರದಿಯಾಗಿಲ್ಲ.
ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ವಿವಿಧ ನದಿಗಳ ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆಯಾಗಿದ್ದು, ಉಜ್ ನದಿಯು ಪ್ರಸ್ತುತ ಅಪಾಯದ ಮಟ್ಟಕ್ಕಿಂತ ಹತ್ತಿರ ಹರಿಯುತ್ತಿದೆ ಎಂದು ತಿಳಿದುಬಂದಿದೆ.
ಜಿಲ್ಲಾಡಳಿತ ಮಂಡಳಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ನಿವಾಸಿಗಳು ಜಾಗರೂಕರಾಗಿರಲು ಮತ್ತು ಜಲಮೂಲಗಳ ಬಳಿ ಹೋಗುವುದನ್ನು ತಪ್ಪಿಸುವಂತೆ ಮನವಿ ಮಾಡಿದೆ.
ಮೇಘಸ್ಫೋಟ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು, ಘಟನೆ ಬಗ್ಗೆ ಮಾಹಿತಿ ಪಡೆದ ನಂತರ ಕಥುವಾ ಎಸ್‌ಎಸ್‌ಪಿ ಶೋಭಿತ್ ಸಕ್ಸೇನಾ ಅವರೊಂದಿಗೆ ಮಾತನಾಡಿದೆ. ಈ ವರೆಗೆ ನಾಲ್ವರು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, ರೈಲ್ವೆ ಹಳಿ, ರಾಷ್ಟ್ರೀಯ ಹೆದ್ದಾರಿ ಮತ್ತು ಕಥುವಾ ಪೊಲೀಸ್ ಠಾಣೆಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ನಾಗರಿಕ ಆಡಳಿತ, ಮಿಲಿಟರಿ ಮತ್ತು ಅರೆಸೇನಾ ಪಡೆಗಳು ಕಾರ್ಯಾಚರಣೆಗೆ ಇಳಿದಿವೆ. ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆಂದು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಜೀವಹಾನಿಯ ತೀವ್ರ ಸಂತಾಪ ಸೂಚಿಸಿದ್ದು, ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪರಿಹಾರ, ರಕ್ಷಣೆ ಮತ್ತು ಸ್ಥಳಾಂತರಿಸುವ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.