ನವದೆಹಲಿ: ಕೇಂದ್ರವು ಮುಂದಿನ ಪೀಳಿಗೆಯ ಜಿಎಸ್‌ಟಿ ಪರಿಷ್ಕರಣೆಯ ಕರಡನ್ನು ರಾಜ್ಯಗಳಿಗೆ ವಿತರಿಸಿದ್ದು, ದೀಪಾವಳಿ ಹಬ್ಬಕ್ಕೂ ಮುಂಚಿತವಾಗಿ ಈ ಪ್ರಸ್ತಾವನೆಯನ್ನು ಜಾರಿಗೆ ತರಲು ಸಹಕಾರ ನೀಡುವಂತೆ ಕೋರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಜಿಎಸ್‌ಟಿ ಪರಿಷ್ಕರಣೆಯು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹಾಗೂ ಸಣ್ಣ ಮತ್ತು ದೊಡ್ಡ ವ್ಯವಹಾರಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.
ಎರಡು ಎಕ್ಸ್‌ಪ್ರೆಸ್‌ವೇಗಳ ಉದ್ಘಾಟನೆಯ ನಂತರ ಇಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಕೇಂದ್ರವು ಜಿಎಸ್‌ಟಿ ಕಾನೂನನ್ನು ಸರಳಗೊಳಿಸಲು ಮತ್ತು ತೆರಿಗೆ ದರಗಳನ್ನು ಪರಿಷ್ಕರಿಸಲು ಉದ್ದೇಶಿಸಿದೆ ಎಂದು ಹೇಳಿದರು.
79ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ, ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಮೋದಿಯವರು, ಕಳೆದ 8 ವರ್ಷಗಳಲ್ಲಿ, ನಾವು ಜಿಎಸ್‌ಟಿಯಲ್ಲಿ ಪ್ರಮುಖ ಸುಧಾರಣೆಯನ್ನು ಕೈಗೊಂಡಿದ್ದೇವೆ. ಮುಂದುವರೆದು ಮತ್ತಷ್ಟು ಜಿಎಸ್‌ಟಿ ಸುಧಾರಣೆಗಳನ್ನು ತರುತ್ತಿದ್ದೇವೆ. ಇದು ದೇಶಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದರು.
'ನಮಗೆ, ಸುಧಾರಣೆ ಎಂದರೆ ಉತ್ತಮ ಆಡಳಿತದ ವಿಸ್ತರಣೆಯಾಗಿದೆ. ಆದ್ದರಿಂದ, ಸರ್ಕಾರವು ನಿರಂತರವಾಗಿ ಸುಧಾರಣೆಗಳನ್ನು ತರುವತ್ತ ಗಮನಹರಿಸುತ್ತಿದೆ. ಮುಂಬರುವ ತಿಂಗಳುಗಳಲ್ಲಿ, ಜನರು ಮತ್ತು ಉದ್ಯಮಗಳ ಜೀವನ ಸುಲಭವಾಗುವಂತೆ ನಾವು ಅನೇಕ ದೊಡ್ಡ ಪರಿಷ್ಕರಣೆಗಳನ್ನು ತರಲಿದ್ದೇವೆ' ಎಂದು ಪ್ರಧಾನಿ ಹೇಳಿದರು.
ಈ ದೀಪಾವಳಿಗೆ, ಜನರು ಜಿಎಸ್‌ಟಿ ಪರಿಷ್ಕರಣೆಯಿಂದಾಗಿ ಡಬಲ್ ಬೋನಸ್ ಪಡೆಯುತ್ತಾರೆ. ಜಿಎಸ್‌ಟಿ ಸುಧಾರಣೆಗಳ ನಂತರ, ಅನೇಕ ಅಗತ್ಯ ವಸ್ತುಗಳು ಅಗ್ಗದ ಬೆಲೆಯಲ್ಲಿ ಸಿಗಲಿವೆ, ಇದು ದೇಶದ ಆರ್ಥಿಕತೆಯನ್ನು ಬಲಪಡಿಸಲಿದೆ. ಕೇಂದ್ರವು ಜಿಎಸ್‌ಟಿ ಸುಧಾರಣೆಯ ಕರಡು ಪ್ರಸ್ತಾವನೆಯನ್ನು ರಾಜ್ಯಗಳಿಗೆ ಕಳುಹಿಸಿದೆ ಎಂದು ಮೋದಿ ಹೇಳಿದರು.