ಬಿಲಾಸ್ಪುರ: ನಾಯಿ ನೆಕ್ಕಿದ್ದ ಆಹಾರವನ್ನು ಶಾಲೆಯೊಂದು ಮಕ್ಕಳಿಗೆ ಬಡಿಸಿರುವ ಘಟನೆಯೊಂದು ಬಲೋದಬಜಾರ್-ಭಟಪಾರ ಜಿಲ್ಲೆಯಲ್ಲಿ ನಡೆದಿದ್ದು, ಘಟನೆ ಬೆನ್ನಲ್ಲೇ ಛತ್ತೀಸ್ಗಢ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಪ್ರಕರಣ ಸಂಬಂಧ ಛತ್ತೀಸ್‌ಗಢ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ, ಪ್ರತೀ ಮಕ್ಕಳಿಗೆ ತಲಾ ರೂ.25,000 ನೀಡುವಂತೆ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ಬಿಭು ದತ್ತ ಗುರು ಅವರಿದ್ದ ವಿಭಾಗೀಯ ಪೀಠವು, ಘಟನೆಯಲ್ಲಿ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದೆ.
ಈ ಘಟನೆಯಲ್ಲಿ ಸರ್ಕಾರದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದ್ದು, ಮುಂದಾದರೂ ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ಒದಗಿಸುವಲ್ಲಿ ಅಧಿಕಾರಿಗಳು ಹೆಚ್ಚು ಜಾಗರೂಕರಾಗಿರುತ್ತಾರೆಂಬ ಭರವಸೆ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿತು.
ಈ ನಡುವೆ ಹೈಕೋರ್ಟ್'ಗೆ ಮಾಹಿತಿ ನೀಡಿರುವ ಛತ್ತೀಸ್ಗಢ ರಾಜ್ಯ ಸರ್ಕಾರ, ಬಾಧಿತ ವಿದ್ಯಾರ್ಥಿಗಳಿಗೆ ಮೂರು ಡೋಸ್‌ಗಳ ರೇಬೀಸ್ ವಿರೋಧಿ ಲಸಿಕೆ ನೀಡಲಾಗಿದ್ದು, ಆರೋಗ್ಯ ತಪಾಸಣೆಯ ವೇಳೆ ಎಲ್ಲಾ ವಿದ್ಯಾರ್ಥಿಗಳು ಫಿಟ್ ಆಗಿರುವುದು ಕಂಡುಬಂದಿದೆ ಎಂದು ತಿಳಿಸಿದರು. ಆದರೆ, ರಾಜ್ಯ ಸರ್ಕಾರದ ವಾದವನ್ನು ಪೀಠವು ಗಣನೆಗೆ ತೆಗೆದುಕೊಳ್ಳಲಿಲ್ಲ.
ಆರೋಗ್ಯ ತಪಾಸಣೆಯ ನಂತರ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆಂದು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಪರಿಹಾರವನ್ನು ನೀಡಲಾಗಿಲ್ಲ ಎಂದು ನ್ಯಾಯಾಲಯಕ್ಕೆ ರಾಜ್ಯ ಸರ್ಕಾರ ತಿಳಿಸಿದೆ.
ಈ ಸ್ವಸಹಾಯ ಗುಂಪು ಸರ್ಕಾರದ ಸಂಸ್ಥೆಯಾಗಿದ್ದು, ಮಧ್ಯಾಹ್ನ ಮಕ್ಕಳಿಗೆ ಬಿಸಿಯೂಟ ಒದಗಿಸಲು ನಿಯೋಜಿಸಲಾಗಿತ್ತು, ಆದರೆ, ಆ ಊಟ ನಾಯಿ ನೆಕ್ಕಿದೆ ಎಂದು ತಿಳಿದಿದ್ದರೂ ಮಕ್ಕಳಿಗೆ ನೀಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಶಾಲೆಯ 84 ಮಕ್ಕಳಿಗೆ ಮೂರು ಡೋಸ್‌ಗಳ ರೇಬೀಸ್ ವಿರೋಧಿ ಔಷಧಿಯನ್ನು ನೀಡಲಾಗಿದ್ದರೂ, ಸ್ವಸಹಾಯ ಸಂಘ, ರಾಜ್ಯದ ಕಡೆಯಿಂದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈ ಅಂಶವನ್ನು ಪರಿಗಣಿಸಿ ಇಂದಿನಿಂದ (ಆಗಸ್ಟ್ 19) ಒಂದು ತಿಂಗಳ ಅವಧಿಯೊಳಗೆ ಆ ಊಟವನ್ನು ಸೇವಿಸಿದ ಸಂಬಂಧಪಟ್ಟ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೆ ರಾಜ್ಯ ಸರ್ಕಾರ 25,000 ರೂ.ಗಳನ್ನು ಪಾವತಿಸುವುದು ಸೂಕ್ತವೆಂದು ನಾವು ಪರಿಗಣಿಸುತ್ತೇವೆ.
ಮುಂದಾದರು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ಒದಗಿಸುವಲ್ಲಿ ರಾಜ್ಯವು ಹೆಚ್ಚು ಜಾಗರೂಕವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆಂದು ತಿಳಿಸಿದೆ.
ಬಲೋದಬಜಾರ್-ಭಟಪಾರ ಜಿಲ್ಲೆಯ ಲಚ್ಚನ್‌ಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜುಲೈ 28 ರಂದು ಈ ಘಟನೆ ನಡೆದಿದೆ.
ಬಿಸಿಯೂಟ ಯೋಜನೆಯಲ್ಲಿ ಸ್ವ-ಸಹಾಯ ಗುಂಪು (SHG) ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಹಾರ ತಯಾರಿಸುತ್ತದೆ. ಈ ಆಹಾರವನ್ನು ನಾಯಿ ನೆಕ್ಕಿದ್ದು, ಈ ಬಗ್ಗೆ ವಿದ್ಯಾರ್ಥಿಗಳು ಶಿಕ್ಷಕರ ಗಮನಕ್ಕೆ ತಂದಿದ್ದರು. ಬಳಿಕ ಶಿಕ್ಷಕರು ಆಹಾರ ವಿತರಿಸದಂತೆ ಸಲಹೆ ನೀಡಿದ್ದಾರೆ. ಆದರೆ, ಸ್ವ-ಸಹಾಯ ಗುಂಪಿನ ಸದಸ್ಯರು ಇದನ್ನು ನಿರ್ಲಕ್ಷಿಸಿ, ಮಕ್ಕಳಿಗೆ ಆಹಾರ ನೀಡಿದ್ದಾರೆ.
ಘಟನೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿಗಳ ಕಚೇರಿ, ಸ್ವಚ್ಛಾಂಪುರದಲ್ಲಿ ಮಧ್ಯಾಹ್ನದ ಊಟ ತಯಾರಿಸುವ ಕೆಲಸದಿಂದ ಸ್ವಸಹಾಯ ಗುಂಪನ್ನು ತೆಗೆದುಹಾಕಲಾಗಿದೆ. ಈ ಸ್ವಸಹಾಯ ಗುಂಪು ಇತರ ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದನ್ನು ನಿಷೇಧಿಸಲಾಗಿದೆ. ಇದಲ್ಲದೆ, ಶಾಲೆಯ ಉಸ್ತುವಾರಿ ಪ್ರಾಂಶುಪಾಲ ಸಂತೋಷ್ ಕುಮಾರ್ ಸಾಹು, ಕ್ಲಸ್ಟರ್ ಪ್ರಾಂಶುಪಾಲರು, ಉಸ್ತುವಾರಿ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಕ್ಲಸ್ಟರ್ ಸಂಯೋಜಕರನ್ನು ಅಮಾನತುಗೊಳಿಸಲಾಗಿದೆ ಎಂದು ಎಂದು ತಿಳಿಸಿದೆ.
ಶಾಲಾ ಶಿಕ್ಷಣ ನಿರ್ದೇಶನಾಲಯವು ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು, ಆಹಾರ ಪದಾರ್ಥಗಳನ್ನು ತಯಾರಿಸಿದ ನಂತರ ನಿಯಮಿತವಾಗಿ ಗುಣಮಟ್ಟ ಮತ್ತು ಸುರಕ್ಷತಾ ತಪಾಸಣೆಗಳನ್ನು ಕೈಗೊಳ್ಳಲು ಮತ್ತು ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿಯಲ್ಲಿ ಕಡ್ಡಾಯಗೊಳಿಸಲಾದ ನಿಗದಿತ ಮಾನದಂಡಗಳನ್ನು ಅನುಸರಿಸುವಂತೆ ಸೂಚಿಸಿದೆ.