ನವದೆಹಲಿ: ಭಾರತದ ಪ್ರಸಿದ್ಧ ವಾಚ್ ಬ್ರ್ಯಾಂಡ್ ಆದ HMT ವಾಚ್‌ಗಳ ಸದ್ಯದ ಕಾರ್ಯಾಚರಣೆ ಮತ್ತು ಅದರ ಭವಿಷ್ಯದ ಯೋಜನೆಗಳ ಕುರಿತು ಚರ್ಚಿಸಲು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಶುಕ್ರವಾರ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ, HMT ಬ್ರ್ಯಾಂಡ್‌ನ ಪರಂಪರೆಯನ್ನು ರಕ್ಷಿಸುವ ಮತ್ತು ಮುಂದುವರಿಸುವ ಸಲುವಾಗಿ ಕಂಪನಿಯ ಕಾರ್ಯಾಚರಣೆಗಳನ್ನು ಸುಧಾರಿಸುವ ಬಗ್ಗೆ ಗಮನ ಹರಿಸಲಾಯಿತು.
ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾದ ಎಚ್‌ಎಂಟಿ ಲಿಮಿಟೆಡ್, ಬೃಹತ್ ಕೈಗಾರಿಕೆಗಳ ಸಚಿವಾಲಯದ ನಿಯಂತ್ರಣದಲ್ಲಿದೆ. ಇದು ಎರಡು ಉತ್ಪಾದನಾ ಘಟಕಗಳನ್ನು ಹೊಂದಿದೆ. ಔರಂಗಾಬಾದ್‌ನಲ್ಲಿ ಆಹಾರ ಸಂಸ್ಕರಣಾ ಯಂತ್ರೋಪಕರಣಗಳ ಘಟಕ ಮತ್ತು ಬೆಂಗಳೂರಿನಲ್ಲಿ ಸಹಾಯಕ ವ್ಯವಹಾರ ಘಟಕವನ್ನು ಹೊಂದಿದೆ.
ಆಹಾರ ಸಂಸ್ಕರಣಾ ಯಂತ್ರೋಪಕರಣಗಳ ಘಟಕವು ಹಾಲು ಸಂಸ್ಕರಣೆ ಮತ್ತು ಇತರ ಆಹಾರ ಸಂಸ್ಕರಣೆಗಳಿಗಾಗಿ ವಿವಿಧ ಯಂತ್ರೋಪಕರಣಗಳನ್ನು ತಯಾರಿಸುತ್ತದೆ. ಇದು ಹಾಲು ಸಂಸ್ಕರಣಾ ಕೈಗಾರಿಕೆಗಳಿಗೆ ಟರ್ನ್-ಕೀ ಯೋಜನೆಗಳನ್ನು ಸಹ ಕೈಗೆತ್ತಿಕೊಳ್ಳುತ್ತದೆ.
HMT ಕೈಗಡಿಯಾರಗಳ ಪರಂಪರೆಯನ್ನು ಜೀವಂತವಾಗಿಡಲು ಮತ್ತು ಬ್ರ್ಯಾಂಡ್ ಇಕ್ವಿಟಿಯನ್ನು ನಗದೀಕರಿಸಲು ಸಹಾಯಕ ವ್ಯವಹಾರ ಘಟಕವು ಕೈಗಡಿಯಾರಗಳು ಮತ್ತು ಗಡಿಯಾರಗಳ ಜೋಡಣೆ ಮತ್ತು ಮಾರಾಟವನ್ನು ನೋಡಿಕೊಳ್ಳುತ್ತದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'HMT ಕೈಗಡಿಯಾರಗಳ ಕಾರ್ಯಕ್ಷಮತೆ ಮತ್ತು ಭವಿಷ್ಯದ ಮಾರ್ಗಸೂಚಿಯ ಕುರಿತು ಪರಿಶೀಲನಾ ಸಭೆಯನ್ನು ನಡೆಸಲಾಗಿದೆ. ಕಾರ್ಯಾಚರಣೆಗಳನ್ನು ಬಲಪಡಿಸುವುದು ಮತ್ತು ಬ್ರ್ಯಾಂಡ್‌ನ ಪರಂಪರೆಯನ್ನು ಸಂರಕ್ಷಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಬೃಹತ್ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು' ಎಂದು ಬರೆದಿದ್ದಾರೆ.