ತಿರುವನಂತಪುರ: ಮುಸ್ಲಿಂ ಮಹಿಳೆಯೊಬ್ಬರು ಪ್ರವೇಶಿಸಿದ್ದಕ್ಕೆ ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗುರವಾಯೂರು ಶ್ರೀ ಕೃಷ್ಣ ದೇಗುಲದ ಕೊಳದಲ್ಲಿ ಮಂಗಳವಾರ 'ಶುದ್ದೀಕರಣ' ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ.
ಇದೇ ಕಾರಣ: ಸಾಮಾಜಿಕ ಮಾಧ್ಯಮ ಇನ್ ಫ್ಲುಯೆನ್ಸರ್ ಜಾಸ್ಮಿನ್ ಜಾಫರ್ ದೇವಸ್ಥಾನದ ಕೊಳದಲ್ಲಿ ತಮ್ಮ ಪಾದಗಳನ್ನು ತೊಳೆಯುತ್ತಿರುವ ದೃಶ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಅವರು ಪೋಸ್ಟ್ ಡಿಲೀಟ್ ಮಾಡಿ, ಕ್ಷಮೆಯಾಚಿಸಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ಶುದ್ದೀಕರಣ ಕಾರ್ಯದ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.
ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಹಿಂದೂಯೇತರ ಮಹಿಳೆಯೊಬ್ಬರು ಕೊಳದ ಆವರಣ ಪ್ರವೇಶಿಸಿ ವಿಡಿಯೋ ಮಾಡಿ ದೇವಾಲಯದ ಸಂಪ್ರದಾಯಗಳನ್ನು ಮುರಿದಿದ್ದಾರೆ. ಹೀಗಾಗಿ ಆಗಸ್ಟ್ 26 ರಂದು ಶುದ್ಧೀಕರಣ ಕಾರ್ಯ ನಡೆಸಲಾಗುವುದು. ಅಂದು ಬೆಳಿಗ್ಗೆ 5 ರಿಂದ ಮಧ್ಯಾಹ್ನದವರೆಗೂ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದೆ.
ದೇವಾಲಯದ ಆವರಣದಲ್ಲಿ ರೀಲ್ಸ್ ಮಾಡುವುದಕ್ಕೆ ನಿರ್ಬಂಧವಿದ್ದರೂ ಅದನ್ನು ಉಲ್ಲಂಘಿಸಲಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ನ್ಯಾಯಾಲಯ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.