ನವದೆಹಲಿ: ದೆಹಲಿ ಆರೋಗ್ಯ ಸಚಿವರಾಗಿದ್ದಾಗ ನಡೆದ ಆಸ್ಪತ್ರೆ ನಿರ್ಮಾಣ ಹಗರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕ ಮತ್ತು ಶಾಸಕ ಸೌರಭ್ ಭಾರದ್ವಾಜ್ ಹಾಗೂ ಇತರರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ದಾಳಿ ನಡೆಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಸುಮಾರು ಒಂದು ಡಜನ್ ಸ್ಥಳಗಳಲ್ಲಿ ಕೇಂದ್ರ ತನಿಖಾ ಸಂಸ್ಥೆ ತೀವ್ರ ಶೋಧ ನಡೆಸುತ್ತಿದೆ.
ಪ್ರಸ್ತುತ ಗ್ರೇಟರ್ ಕೈಲಾಶ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಭಾರದ್ವಾಜ್ ಅವರು, ಈ ಹಿಂದೆ ದೆಹಲಿ ಸರ್ಕಾರದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು ದೆಹಲಿ ಜಲ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ ಮತ್ತು ಪ್ರಸ್ತುತ ಎಎಪಿಯ ದೆಹಲಿ ಘಟಕದ ಮುಖ್ಯಸ್ಥರಾಗಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ದೆಹಲಿ ಬಿಜೆಪಿ ಸರ್ಕಾರ, ಹಿಂದಿ ಸರ್ಕಾರದಲ್ಲಿ ವಿವಿಧ ಆರೋಗ್ಯ ಮೂಲಸೌಕರ್ಯ ಯೋಜನೆಗಳಲ್ಲಿ ಗಂಭೀರ ಅಕ್ರಮ ಮತ್ತು ಭ್ರಷ್ಟಾಚಾರ" ನಡೆದಿದೆ ಎಂದು ಆರೋಪಿಸಿದ ನಂತರ ಎಸಿಬಿ ದೂರು ದಾಖಲಿಸಿದೆ.
2018-19ರ ಅವಧಿಯಲ್ಲಿ, 5,590 ಕೋಟಿ ರೂ. ಮೌಲ್ಯದ 24 ಆಸ್ಪತ್ರೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.
ಆದಾಗ್ಯೂ, ಈ ಯೋಜನೆಗಳು ಗಣನೀಯ ವೆಚ್ಚ ಏರಿಕೆಯೊಂದಿಗೆ ಹಲವು ಅಪೂರ್ಣವಾಗಿಯೇ ಉಳಿದಿವೆ.
ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಎಎಪಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಈ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಅರ್ಹತೆಯ ಕುರಿತ ವಿವಾದದಿಂದ ಗಮನ ಬೇರೆಡೆ ಸೆಳೆಯುವ ತಂತ್ರ ಎಂದು ಹೇಳಿದ್ದಾರೆ.
ತನಿಖಾ ಸಂಸ್ಥೆ ಆರಂಭದಲ್ಲಿ ಪ್ರಕರಣ ದಾಖಲಿಸಿದಾಗ, ಭಾರದ್ವಾಜ್ ದೆಹಲಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿರಲಿಲ್ಲ ಎಂದು ಸಿಸೋಡಿಯಾ ತಿಳಿಸಿದ್ದಾರೆ.
ಆರೋಪಗಳು ಆಧಾರರಹಿತ ಎಂದು ಅವರು, ದೆಹಲಿಯ ಮಾಜಿ ಸಚಿವ ಸತ್ಯೇಂದರ್ ಜೈನ್ ಅವರ ಪ್ರಕರಣವನ್ನು ಎಎಪಿ ನಾಯಕರನ್ನು ಗುರಿಯಾಗಿಸಿ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ ಎಂಬುದಕ್ಕೆ ಉದಾಹರಣೆ ಎಂದು ಉಲ್ಲೇಖಿಸಿದರು.
ಸಿಸೋಡಿಯಾ ಹೇಳಿಕೆಯನ್ನು ಬೆಂಬಲಿಸಿದ, ಎಎಪಿ ನಾಯಕಿ ಮತ್ತು ಮಾಜಿ ಸಿಎಂ ಅತಿಶಿ, ಸತ್ಯೇಂದರ್ ಜೈನ್ ವಿರುದ್ಧ ಯಾವುದೇ ದೃಢವಾದ ಪುರಾವೆಗಳು ಪತ್ತೆಯಾಗದೆಯೇ ಅವರನ್ನು ಮೂರು ವರ್ಷಗಳ ಕಾಲ ಜೈಲಿಗೆ ಹಾಕಲಾಯಿತು. ತನಿಖಾ ಸಂಸ್ಥೆಗಳು ಈಗ ಅವರ ಪ್ರಕರಣದಲ್ಲಿ ಬಿ-ರಿಪೋರ್ಟ್ ಸಲ್ಲಿಸಿವೆ ಎಂದರು.