ನವದೆಹಲಿ: ರಷ್ಯಾದಿಂದ ತೈಲ ಮತ್ತು ರಕ್ಷಣಾ ಉಪಕರಣಗಳ ಖರೀದಿ ಹಿನ್ನೆಲೆಯಲ್ಲಿ ಭಾರತದ ಮೇಲೆ ಶೇ.25 ರಷ್ಟು ಹೆಚ್ಚುವರಿ ಸುಂಕದೊಂದಿಗೆ ಒಟ್ಟಾರೇ ಶೇ.50 ರಷ್ಟು ಅಮೆರಿಕದ ಸುಂಕ ಇಂದಿನಿಂದ ಜಾರಿಗೆ ಬಂದಿರುವಂತೆಯೇ ಉಭಯ ದೇಶಗಳ ನಡುವಿನ ಸುಂಕದ ಸಂಘರ್ಷ ಮತ್ತಷ್ಟು ತಾರಕಕ್ಕೇರಿದೆ.
ಈ ಮಧ್ಯೆ US ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಆಶಾವಾದದ ಮಾತುಗಳನ್ನಾಡಿದ್ದು, ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆ ಬಗ್ಗೆ ವಿಶ್ವಾಸ ಹೊಂದಿರುವುದಾಗಿ ಹೇಳಿದ್ದಾರೆ.
ಫಾಕ್ಸ್ ಬ್ಯುಸಿನೆಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬೆಸೆಂಟ್, ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ, ಯುಎಸ್ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿದೆ. ಕೊನೆಯಲ್ಲಿ ನಾವು ಒಟ್ಟಿಗೆ ಸೇರಿ ಚರ್ಚಿಸುತ್ತೇವೆ ಎಂದಿದ್ದಾರೆ.
ಆದಾಗ್ಯೂ ಭಾರತದ ಜೊತೆಗೆ ಇನ್ನೂ ವ್ಯಾಪಾರ ಒಪ್ಪಂದವೇರ್ಪಡೆ ವಿಳಂಬವಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ನಮ್ಮಲ್ಲಿ ಇನ್ನೂ ಒಪ್ಪಂದ ಆಗಿಲ್ಲ. ಮೇ ಅಥವಾ ಜೂನ್ ವೇಳೆಗೆ ನಾವು ಒಪ್ಪಂದ ಪೂರ್ಣಗೊಳ್ಳಿಸುವ ನಿರೀಕ್ಷೆಯಲ್ಲಿದ್ದೆ. ಆದರೆ ಅದು ಸಾಧ್ಯವಾಗಿಲ್ಲ. ರಷ್ಯಾದ ಕಚ್ಚಾ ತೈಲ ಖರೀದಿಯ ಸಮಸ್ಯೆಯೂ ಇದೆ. ಅದರಿಂದ ಅವರು ಲಾಭ ಗಳಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದಲ್ಲಿ ಬಲವಾದ ಬಾಂಧವ್ಯ ಹೊಂದಿದ್ದರೂ, ಇದು ಸಂಕೀರ್ಣವಾದ ಸಂಬಂಧವಾಗಿದೆ. ಕೇವಲ ರಷ್ಯಾದ ತೈಲದ ಬಗ್ಗೆ ಮಾತ್ರವಲ್ಲ ಎಂದು ಬೆಸೆಂಟ್ ಹೇಳಿದರು.
ಸುಂಕ ಸಮಸ್ಯೆ ಬಗೆಹರಿಸಲು ಪ್ರಯತ್ನ ಮುಂದುವರಿಕೆ:
"ಭಾರತ ಮತ್ತು ಅಮೆರಿಕ ನಡುವೆ ಸಂವಹನ ಮಾರ್ಗಗಳು ಮುಕ್ತವಾಗಿದ್ದು, ಪ್ರಸ್ತುತ ಸುಂಕದ ಸಮಸ್ಯೆ ಪರಿಹರಿಸಲು ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಸರ್ಕಾರಿ ಮೂಲಗಳು ಬುಧವಾರ ತಿಳಿಸಿವೆ.
ಭಾರತೀಯ ರಫ್ತುಗಳ ಮೇಲಿನ ಸುಂಕದ ಪರಿಣಾಮ ಭಯಪಡುವಷ್ಟು ತೀವ್ರವಾಗಿದೆ ಅನ್ನಿಸುತ್ತಿಲ್ಲ. ಸಮಸ್ಯೆಯನ್ನು ಪರಿಹರಿಸಲು ಭಾರತ ಮತ್ತು ಅಮೆರಿಕ ನಡುವೆ ಮಾತುಕತೆಗಳು ನಡೆಯುತ್ತಿವೆ. ಭಾರತ ಮತ್ತು ಯುಎಸ್ ನಡುವಿನ ದೀರ್ಘಾವಧಿಯ ಸಂಬಂಧದಲ್ಲಿ ಇದು ತಾತ್ಕಾಲಿಕ ಹಂತವಾಗಿದೆ ಎಂದು ಮೂಲಗಳು ಹೇಳಿವೆ.