ಮುಂಬೈ: ಹಿಂದೂ ಧರ್ಮದಲ್ಲಿ ಅಪಾರ ನಂಬಿಕೆ, ಭಕ್ತಿ, ಶ್ರದ್ದೆ ಹೊಂದಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ ಮುಂಬೈಯಲ್ಲಿ ನಡೆಯುತ್ತಿರುವ ಪ್ರಸಿದ್ಧ ಲಾಲ್ ಬೌಚಾ ರಾಜ ಗಣಪತಿಯ ದರ್ಶನ ಪಡೆದರು.
ಪ್ರತಿವರ್ಷದಂತೆ ಈ ವರ್ಷವೂ ತನ್ನ ಕುಟುಂಬ ಸದಸ್ಯರಾದ ಪತ್ನಿ ಸೋನಲ್ ಷಾ, ಪುತ್ರ ಹಾಗೂ ಐಸಿಸಿ ಅಧ್ಯಕ್ಷ ಜಯ್ ಶಾ ಹಾಗೂ ಅವರ ಪತ್ನಿ, ಮಕ್ಕಳೊಂದಿಗೆ ತೆರಳಿದ ಅಮಿತ್ ಶಾ, ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಈ ವೇಳೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಉಪಸ್ಥಿತರಿದ್ದರು.
ಶುಕ್ರವಾರ ರಾತ್ರಿಯೇ ನಗರಕ್ಕೆ ಭೇಟಿ ನೀಡಿದ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರನ್ನು ಭೇಟಿಯಾಗಿದ್ದು, ಮುಂಬರುವ ಉಪ ರಾಷ್ಟ್ರಪತಿ ಚುನಾವಣೆ ಮತ್ತಿತರ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.
ಇಂದು ಬೆಳಗ್ಗೆ ಶಿಂಧೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿ ಅತುಲ್ ಲಿಮಾಯೆ, ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ರವೀಂದ್ರ ಚವಾಣ್ ಮತ್ತು ಹೊಸದಾಗಿ ನೇಮಕಗೊಂಡ ಮುಂಬೈ ಬಿಜೆಪಿ ಮುಖ್ಯಸ್ಥ ಅಮೀತ್ ಸತಮ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಸಿಎಂ ಫಡ್ನವೀಸ್ ಅವರ ಅಧಿಕೃತ ನಿವಾಸ 'ವರ್ಷ'ಕ್ಕೆ ಭೇಟಿ ನೀಡಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಮಿತ್ ಶಾ ಅವರು ಬಾಂದ್ರಾ ಪಶ್ಚಿಮ ಮತ್ತು ಅಂಧೇರಿ ಪೂರ್ವದಲ್ಲಿರುವ ಗಣೇಶ ಪೆಂಡಲ್ ಗಳಿಗೂ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.