ನವದೆಹಲಿ: ದೆಹಲಿ, ಮುಂಬೈ, ಕೋಲ್ಕತ್ತಾ, ಅಮೃತಸರ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಜಿಪಿಎಸ್ ಸ್ಪೂಫಿಂಗ್ ಮತ್ತು ವಿಮಾನಗಳಿಗೆ ಅಡ್ಡಿಪಡಿಸುವ ಘಟನೆಗಳು ವರದಿಯಾಗಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ ರಾಜ್ಯಸಭೆಯಲ್ಲಿ ಬಹಿರಂಗಪಡಿಸಿದೆ.
ವೈಎಸ್‌ಆರ್‌ಸಿಪಿ ಸಂಸದ ಎಸ್ ನಿರಂಜನ್ ರೆಡ್ಡಿ ಅವರು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ನಾಗರಿಕ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ಡು ಅವರು, ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ(ಐಜಿಐಎ) ಸುತ್ತಮುತ್ತಲ ಪ್ರದೇಶಗಳಲ್ಲಿ ಜಿಪಿಎಸ್ ಸ್ಪೂಫಿಂಗ್ ವರದಿಯಾಗಿದೆ ಎಂದು ದೃಢಪಡಿಸಿದರು.
"ಕೆಲವು ವಿಮಾನಗಳು ನವದೆಹಲಿಯ ಐಜಿಐಎ ಸುತ್ತಮುತ್ತಲ ಪ್ರದೇಶಗಳಲ್ಲಿ ಜಿಪಿಎಸ್ ಆಧಾರಿತ ಲ್ಯಾಂಡಿಂಗ್ ಕಾರ್ಯವಿಧಾನಗಳನ್ನು ಬಳಸುತ್ತಿರುವಾಗ ಮತ್ತು ಆರ್‌ಡಬ್ಲ್ಯುವೈ(ರನ್‌ವೇ) 10 ರಲ್ಲಿ ಸಮೀಪಿಸುತ್ತಿರುವಾಗ ಜಿಪಿಎಸ್ ಸ್ಪೂಫಿಂಗ್ ವರದಿಯಾಗಿದೆ.
"ಈ ವಿಮಾನಗಳಿಗೆ ತುರ್ತು ಪರಿಸ್ಥಿತಿ ಕಾರ್ಯವಿಧಾನಗಳನ್ನು ಬಳಸಲಾಗಿದೆ. ಆದರೆ ಇತರ ರನ್‌ವೇಗಳಲ್ಲಿ ಸಾಂಪ್ರದಾಯಿಕ ನ್ಯಾವಿಗೇಷನ್ ಸೌಲಭ್ಯಗಳು ಕಾರ್ಯನಿರ್ವಹಿಸುತ್ತಿರುವುದರಿಂದ ವಿಮಾನಗಳ ಚಲನೆಯ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ ಎಂದು ರಾಮ್ ಮೋಹನ್ ನಾಯ್ಡು ಅವರು ತಿಳಿಸಿದ್ದಾರೆ.
ಈ ಸಮಸ್ಯೆಯನ್ನು ಎದುರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಸ್ಪೂಫಿಂಗ್ ಮೂಲವನ್ನು ಗುರುತಿಸಲು ವೈರ್‌ಲೆಸ್ ಮಾನಿಟರಿಂಗ್ ಆರ್ಗನೈಸೇಶನ್(ಡಬ್ಲ್ಯೂಎಂಒ)ಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಏನಿದು GPS ಸ್ಪೂಫಿಂಗ್?
ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್(ಜಿಪಿಎಸ್)/ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್(ಜಿಎನ್‌ಎಸ್‌ಎಸ್) ಸ್ಪೂಫಿಂಗ್ ಮತ್ತು ಜಾಮಿಂಗ್ ಸಹ ಒಂದು ಬಗೆಯ ಸೈಬರ್ ದಾಳಿಯಾಗಿದ್ದು, ಸುಳ್ಳು ಸಂಕೇತಗಳನ್ನು ನೀಡುವ ಮೂಲಕ ಬಳಕೆದಾರರ ನ್ಯಾವಿಗೇಷನ್ ವ್ಯವಸ್ಥೆಯನ್ನು ನಿರ್ವಹಿಸುವ ಪ್ರಯತ್ನವಾಗಿದೆ.
ನಕಲಿ ಉಪಗ್ರಹ ಸಂಕೇತಗಳನ್ನು ಉದ್ದೇಶಪೂರ್ವಕವಾಗಿ ವಿಮಾನಗಳಿಗೆ ರವಾನಿಸಲಾಗುತ್ತದೆ. ಈ ನಕಲಿ ಸಂಕೇತಗಳು ವಿಮಾನದ ದಿಕ್ಕೂಚಿ ವ್ಯವಸ್ಥೆಗಳನ್ನು ದಿಕ್ಕು ತಪ್ಪಿಸುತ್ತವೆ ಅಂದರೆ ವಿಮಾನಕ್ಕೆ ಅದರ ನಿಜವಾದ ಸ್ಥಳ, ವೇಗ ಅಥವಾ ಸಮಯದ ಬಗ್ಗೆ ತಪ್ಪು ಮಾಹಿತಿಯನ್ನು ನೀಡುತ್ತವೆ. ಇದು ವಿಮಾನವು ದಾರಿತಪ್ಪಿ ಬೇರೆಡೆ ಸಾಗಲು ಕಾರಣವಾಗುವ ಸಾಧ್ಯತೆಯಿರುತ್ತದೆ.